ವೇತನ, ಪಿಂಚಣಿ ಮರುನಿಗದಿ: ಸಣ್ಣ ಮೊತ್ತ ನೀಡಿದರೆ ಆಕಾಶ ಕಳಚಿ ಬೀಳದು- ಕರ್ನಾಟಕ ಹೈಕೋರ್ಟ್
ವೇತನ, ಪಿಂಚಣಿ ಮರುನಿಗದಿ: ಸಣ್ಣ ಮೊತ್ತ ನೀಡಿದರೆ ಆಕಾಶ ಕಳಚಿ ಬೀಳದು- ಕರ್ನಾಟಕ ಹೈಕೋರ್ಟ್
ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆಪಿಟಿಸಿಎಲ್) ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವೇತನ ಮತ್ತು ಪಿಂಚಣಿಯ ಮರುನಿಗದಿಗಾಗಿ ನ್ಯಾಯಾಲಯದ ಮೊರೆ ಹೋದವರಿಗೆ ಸಿಹಿ ಸುದ್ದಿ. ನಿವೃತ್ತ ನೌಕರರ ಬಗ್ಗೆ ಹೈಕೋರ್ಟ್ ಕೂಡ ಪರವಾದ ಅಭಿಪ್ರಾಯ ನೀಡಿದ್ದು, ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನೌಕರರಿಗೆ ಸಣ್ಣ ಮೊತ್ತ ನೀಡಿದರೆ ಆಕಾಶವೇನೂ ಕಳಚಿ ಬೀಳದು ಎಂದು ಹೇಳಿದೆ.
ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆಪಿಟಿಸಿಎಲ್) ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನ ಕೈಯಲ್ಲಿ ಬಲವಿದ್ದಾಗ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಇದೀಗ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಇರುವ ಪಿಂಚಣಿದಾರರನ್ನು ಅಂತಃಕರಣದಿಂದ ನೋಡಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ನಿಗಮದ ಪರ ವಕೀಲರು, ಸುಪ್ರೀಂಕೋರ್ಟ್ ಕೆಪಿಟಿಸಿಎಲ್ Vs ಸಿಪಿ ಮುಂದಿನಮನಿ ಪ್ರಕರಣದಲ್ಲಿ ಉದ್ಯೋಗಿಗಳಿಗೆ ಇಂಥದ್ದೇ ಪರಿಹಾರ ಒದಗಿಸಲಾಗಿದೆ. ಹೀಗಾಗಿ ಈ ಮೊದಲು ನಿವೃತ್ತರಾದ ಉದ್ಯೋಗಿಗಳಿಗೆ ಇದೇ ರೀತಿಯ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.
ಕೆಪಿಟಿಸಿಎಲ್ ಮಾಡಿದ ಈ ವಾದವನ್ನು ತಳ್ಳಿ ಹಾಕಿದ ನ್ಯಾಯಾಲಯ, ಏಕಸದಸ್ಯ ನ್ಯಾಯಪೀಠದ ಆದೇಶದಿಂದಾಗಿ ಉದ್ಯೋಗಿಗಳಿಗೆ ಸಣ್ಣ ಪ್ರಮಾಣದ ವೇತನ ಹೆಚ್ಚಳ ನೀಡಬೇಕಾಗುತ್ತದೆ. ಇದರಿಂದ ನಿಗಮದ ಬಜೆಟ್ ಮೇಲೆ ಅಷ್ಟೇನೂ ಹೊರೆ ಬೀಳದು. ಹಲವು ವರ್ಷಗಳ ಕಾಲ ನಿಗಮಕ್ಕಾಗಿ ಶ್ರಮಿಸಿದ ಸಿಬ್ಬಂದಿಗೆ ಸಣ್ಣ ಮೊತ್ತ ನೀಡಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.