ರಾಜಿಯಾಗಲು ಅವಕಾಶ ಇಲ್ಲದ ಪ್ರಕರಣಗಳ ಇತ್ಯರ್ಥ: ಲೋಕ ಅದಾಲತ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
ರಾಜಿಯಾಗಲು ಅವಕಾಶ ಇಲ್ಲದ ಪ್ರಕರಣಗಳ ಇತ್ಯರ್ಥ: ಲೋಕ ಅದಾಲತ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ- ಕರ್ನಾಟಕ ಹೈಕೋರ್ಟ್
ರಾಜಿಗೆ ಅವಕಾಶ ಇಲ್ಲದ ಆರೋಪ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ಗೆ ಕಳುಹಿಸುವಂತಿಲ್ಲ. ಒಂದು ವೇಳೆ, ಇಂತಹ ಪ್ರಕರಣಗಳು ಲೋಕ ಅದಾಲತ್ ಮುಂದೆ ಬಂದರೂ ಆ ಪ್ರಕರಣವನ್ನು ಇತ್ಯರ್ಥ ಮಾಡುವ ಅಧಿಕಾರ ವ್ಯಾಪ್ತಿ ಲೋಕ ಅದಾಲತ್‌ಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಕೆ. ಎಸ್. ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 19(5)ರ ಪ್ರಕಾರ, ಲೋಕ ಅದಾಲತ್‌ಗೆ ಅಂತಹ ಅಧಿಕಾರ ವ್ಯಾಪ್ತಿ ಇಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಪ್ರಕರಣದ ವಿವರ:
ಕರ್ನಾಟಕ ಅಬಕಾರಿ ಕಾಯಿದೆ, 1965 ರ ಸೆಕ್ಷನ್ 32 ಮತ್ತು 34 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಅಕ್ಕೂರು ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯ ಆಧಾರದ ಮೇಲೆ ಸದ್ರಿ ಪ್ರಕರಣದ ಪ್ರತಿವಾದಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು.
ರೂ. 1965/- ಮೌಲ್ಯದ ಅಕ್ರಮ ಮದ್ಯ ಮಾರಾಟಕ್ಕಾಗಿ ಇಟ್ಟುಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ, ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಲೋಕ ಅದಾಲತ್‌ಗೆ ವರ್ಗಾಯಿಸಿತು. 7-04-2014ರಂದು ನಡೆದ ಲೋಕ್ ಅದಾಲತ್‌ನಲ್ಲಿ ಅವಾರ್ಡ್/ಆದೇಶ ಮೂಲಕ ಆರೋಪಿಯು ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿ ಇತ್ಯರ್ಥಪಡಿಸಿತು.
ಆರೋಪಿ ಅಬಕಾರಿ ಕಾಯ್ದೆಯ ಸೆಕ್ಷನ್ 32 ಮತ್ತು 34 ರ ಅಡಿಯಲ್ಲಿ ಅಪರಾಧಿ ಎಂದು ಲೋಕ ಅದಾಲತ್ ಘೋಷಿಸಿತು. ರೂ. 500/- ದಂಡ ಮತ್ತು ನ್ಯಾಯಾಲಯದ ಕಲಾಪದ ವರೆಗೆ ಜೈಲು ಶಿಕ್ಷೆಯನ್ನು ವಿಧಿಸಿತು. ಇದರಿಂದ ಬಾಧಿತ ಪ್ರಾಸಿಕ್ಯೂಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಲೋಕ ಅದಾಲತ್ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಸೆಕ್ಷನ್ 19 ಮತ್ತು 20ನ್ನು ಉಲ್ಲಂಘಿಸಿದೆ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ನಲ್ಲಿ ವಾದಿಸಿತು. ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ಲೋಕ ಅದಾಲತ್ ರಾಜಿ ಮಾಡಿಕೊಳ್ಳಲಾಗದ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಲೋಕ ಅದಾಲತ್‌ಗೆ ರಾಜಿ ಮಾಡಿಕೊಳ್ಳಲಾಗದ ಪ್ರಕರಣ ಇತ್ಯರ್ಥಪಡಿಸುವ ಅಧಿಕಾರ ವ್ಯಾಪ್ತಿ ಇಲ್ಲ ಎಂದು ತೀರ್ಪು ನೀಡಿತು. ಹಾಗಾಗಿ, ಕಾನೂನು ದೃಷ್ಟಿಯಲ್ಲಿ ಲೋಕ ಅದಾಲತ್ ಮುಂದೆ ಆರೋಪಿ ಮಾಡಿರುವ ತಪ್ಪೊಪ್ಪಿಗೆಗೆ ಯಾವುದೇ ಸಿಂಧುತ್ವ ಇಲ್ಲ ಎಂದು ತೀರ್ಪು ನೀಡಿತು. ಹಾಗೂ ಪ್ರಕರಣವನ್ನು ಮರುಸ್ಥಾಪಿಸುವಂತೆ ಆದೇಶ ಹೊರಡಿಸಿತು.
ಪ್ರಕರಣ: ಕರ್ನಾಟಕ ರಾಜ್ಯ Vs ಶೇಖರ್
ಕರ್ನಾಟಕ ಹೈಕೋರ್ಟ್, WP 46821/2016, Dated 11-06-2021
Court cannot refer a case relating to non-compoundable offence to Lok Adalt. Lok Adalat has no jurisdiction to determine such a case, Karnataka High Court