ಮೀಡಿಯಾ ಮುಂದೆ ಸರ್ಕಾರಿ ನೌಕರರು ಹೇಳಿಕೆ ನೀಡಬಹುದೇ..?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಮೀಡಿಯಾ ಮುಂದೆ ಸರ್ಕಾರಿ ನೌಕರರು ಹೇಳಿಕೆ ನೀಡಬಹುದೇ..?: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ
ಮೀಡಿಯಾ ಮುಂದೆ ಸರ್ಕಾರಿ ಅಧಿಕಾರಿಗಳು ಹೇಳಿಕೆ ನೀಡಬಹುದೇ..? ಎಂಬ ವಿಷಯವನ್ನು ಇತ್ಯರ್ಥಪಡಿಸುವ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಇಲಾಖಾ ಕ್ರಮ ಪ್ರಶ್ನಿಸಿ ಇಲಾಖಾ ನೌಕರ ಆದರ್ಶ ಕುಮಾರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಅಲಹಾಬಾದ್ ಹೈಕೋರ್ಟ್‌ನ ನ್ಯಾ. ಜೆ.ಜೆ. ಮುನೀರ್ ನೇತೃತ್ವದ ಏಕಸದಸ್ಯ ಪೀಠ ಈ ವಿಚಾರಣೆ ನಡೆಸುತ್ತಿದೆ.
ಸರ್ಕಾರ ಅಧಿಕೃತ ವಕ್ತಾರರ ಮೂಲಕ ಮಾತನಾಡಬೇಕು. ಇಲ್ಲವೇ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಯಾರಾದರೂ ಅಥವಾ ನಿರ್ದಿಷ್ಟ ಸಂಸ್ಥೆ ಇಲ್ಲವೇ ಇಲಾಖೆಯಿಂದ ಗೊತ್ತುಪಡಿಸಿದ ಅಧಿಕಾರಿ ಮಾತನಾಡಬಹುದು ಎಂದು ನ್ಯಾಯಪೀಠ ಹೇಳಿದೆ.
ವ್ಯತಿರಿಕ್ತ ಹೇಳಿಕೆ ನೀಡಬಾರದು, ಸರ್ಕಾರದ ವಿರುದ್ಧ ನಿಲುವು ವ್ಯಕ್ತಪಡಿಸಬಾರದು ಎಂಬ ಕಾರಣಕ್ಕೆ ಮುಕ್ತ ಮಾತುಕತೆಗೆ ಅವಕಾಶ ನೀಡದೇ ಇರಬಹುದು. ಆದರೆ, ಈ ಹಿಂದೆ ಇದ್ದ ನೀತಿ ನಿಯಮಗಳಲ್ಲಿ ಬದಲಾವಣೆಯಾಗದೇ ಇದ್ದಲ್ಲಿ ಸರ್ಕಾರಿ ನೌಕರರು ಮಾಧ್ಯಮದ ಮುಂದೆ ತಾವಾಗಿಯೇ ಮಾತನಾಡಲು ಯಾವುದೇ ಸ್ವಾತಂತ್ರ್ಯ ಇಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ.
ನಿಯಮಗಳ ಪ್ರಕಾರ ಯಾವುದೇ ನಿಷೇಧ ಅಸ್ತಿತ್ವದಲ್ಲಿ ಇದ್ದರೆ, ಮಾಧ್ಯಮಗಳೊಂದಿಗೆ ಪೂರ್ವಸಿದ್ದತೆಯಿಲ್ಲದೆ ಮಾತನಾಡುವಂತಿಲ್ಲ ಎಂದು ಅದು ಹೇಳಿದೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತವಾಗಿ ಮಾತನಾಡುವುದು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಅಂತೆಯೇ, ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೇಮಕಗೊಂಡಿರುವ ಸರ್ಕಾರಿ ನೌಕರರು ಮತ್ತು ಕೆಳ ಹಂತದ ಶ್ರೇಣಿಯಲ್ಲಿ ಇರುವವರೂ ಮಾಧ್ಯಮಗಳೊಂದಿಗೆ ಮಾತನಾಡುವ ಉದಾಹರಣೆ ಇದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.