ಆತ್ಮಹತ್ಯೆ ಪ್ರಚೋದನೆ ಆರೋಪ: ಉದಯಕುಮಾರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಆತ್ಮಹತ್ಯೆ ಪ್ರಚೋದನೆ ಆರೋಪ: ಉದಯಕುಮಾರ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಉಡುಪಿಯ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಹಿಳಾ ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಬ್ಯಾಂಕ್‌ನ ಮೇಲ್ವಿಚಾರಕ ಉದಯ ಕುಮಾರ್ ಶೆಟ್ಟಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಉದಯ ಕುಮಾರ್ ಶೆಟ್ಟಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರು ತನಿಖಾಧಿಕಾರಿ ಮುಂದೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಮೃತ ಆಶಾ ಬ್ಯಾಂಕಿನಲ್ಲಿ ಸಹಾಯಕ ಮ್ಯಾನೇಜರ್ ಆಗಿದ್ದರು. 2024ರ ಮಾರ್ಚ್ 23ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಆಶಾ ಅವರ ಪತಿ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿವರ
2024ರ ಮಾರ್ಚ್ 23ರಂದು ಬೆಳಿಗ್ಗೆ 9 ಗಂಟೆಗೆ ಆಶಾ ಬ್ಯಾಂಕ್‌ನ ಕರ್ತವ್ಯಕ್ಕೆ ಹಾಜರಾಗಿದ್ದರು. ಆ ದಿನ ಮಧ್ಯಾಹ್ನ 12-30ರ ಸುಮಾರಿಗೆ ಬ್ಯಾಂಕ್ ಮ್ಯಾನೇಜರ್ ಮಹೇಶ್ ರಾವ್ ಅವರು ಪತಿಗೆ ಕರೆ ಮಾಡಿ ನಿಮ್ಮ ಪತ್ನಿ ಕೆಲಸ ಮಧ್ಯಕ್ಕೆ ಬಿಟ್ಟು ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದರು.
ಕೂಡಲೇ ಪತಿ ಮನೆಗೆ ನೋಡಿ ತೆರಳಿದಾಗ ಆಶಾ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮಾರ್ಗ ಮಧ್ಯದಲ್ಲೇ ಆಶಾ ಸಾವನ್ನಪ್ಪಿದರು.
ಬ್ಯಾಂಕ್‌ನ ಸಹಾಯಕ ಮ್ಯಾನೇಜರ್ ಆಗಿದ್ದ ನನ್ನ ಪತ್ನಿ ಆಶಾ 2024ರ ಮಾರ್ಚ್ 23ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್ ಮೇಲ್ವಿಚಾರಕರಾದ ಕುಂದಾಪುರ ತಾಲೂಕಿನ ಐರಬೈಲು ಉಳ್ಳೂರು ಗ್ರಾಮದ ಉದಯ ಕುಮಾರ್ ಅವರು ಆಶಾ ವಿರುದ್ಧ ಹಣಕಾಸಿನ ವಂಚನೆಯ ಆರೋಪ ಹೊರಿಸಿದ್ದರು. ಹಣ ಮರುಪಾವತಿಗಾಗಿ ಒತ್ತಾಯಿಸಿದ್ದರು. ವಾಪಸ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಹೇಳಿದ್ದರು. ಈ ಪ್ರಚೋದನೆಯಿಂದಲೇ ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಪತಿ ದೂರು ನೀಡಿದ್ದರು.
ಈ ದೂರನ್ನು ವಿಚಾರಣೆ ನಡೆಸಿದ್ದ ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.