ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾ. ಎ.ಎಸ್. ಬೋಪಣ್ಣ ನಿವೃತ್ತಿ: ಮಿ.ಡಿಪೆಂಡೆಬಲ್ ಎಂದು ಬಣ್ಣಿಸಿದ ಸಿಜೆಐ ಚಂದ್ರಚೂಡ್
ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾ. ಎ.ಎಸ್. ಬೋಪಣ್ಣ ನಿವೃತ್ತಿ: ಮಿ.ಡಿಪೆಂಡೆಬಲ್ ಎಂದು ಬಣ್ಣಿಸಿದ ಸಿಜೆಐ ಚಂದ್ರಚೂಡ್
ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘ ವಿದಾಯಕೂಟವನ್ನು ಆಯೋಜಿಸಿತ್ತು.
ಈ ವಿದಾಯಕೂಟದಲ್ಲಿ ಸಿಜೆಐ ಡಿ.ವೈ. ಚಂದ್ರಚೂಡ್ ಸೇರಿದಂತೆ ನ್ಯಾಯಮೂರ್ತಿಗಳು, ವಕೀಲರು, ಸಿಬ್ಬಂದಿ ವರ್ಗ ಹಾಜರಿದ್ದರು.
ಬೋಪಣ್ಣ ಅವರ ಕಾರ್ಯವೈಖರಿಯನ್ನು ಮನಸಾರೆ ಕೊಂಡಾಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಮಿ.ಡಿಪೆಂಡೆಬಲ್ ಆಗಿದ್ದರು. ಅದೇ ರೀತಿ ಎ.ಎಸ್. ಬೋಪಣ್ಣ ಸುಪ್ರೀಂ ಕೋರ್ಟ್‌ನ ಮಿಸ್ಟರ್ ಡಿಪೆಂಡೆಬಲ್ ಆಗಿದ್ದರು ಎಂದು ಬಣ್ಣಿಸಿದರು.
ಅವರೊಬ್ಬ ಕ್ಯಾಪ್ಟನ್ ಕೂಲ್ ರೀತಿ ಇರುತ್ತಿದ್ದರು. ಅವರ ನೆಚ್ಚಿನ ಆಟಗಾರ ಯಾರೋ ನನಗೆ ತಿಳಿದಿಲ್ಲ. ಆದರೆ, ರಾಹುಲ್ ದ್ರಾವಿಡ್ ಅವರಂತೆ ಬೋಪಣ್ಣ ಮಿಸ್ಟರ್ ಡಿಪೆಂಡೆಬಲ್ ಎಂದು ಶ್ಲಾಘಿಸಿದರು.
ಅವರ ಮೆದು ಮಾತು ಮೌಲ್ಯಯುತವಾಗಿದ್ದವು. ಅದೆಷ್ಟೋ ಯುವ ವಕೀಲರು ಬೋಪಣ್ಣ ಅವರಿಗೆ ಕೃತಜ್ಞರಾಗಿರುತ್ತಾರೆ ಎಂದು ಸ್ಮರಿಸಿದ ಚಂದ್ರಚೂಡ್, ಕಲಾಪದಲ್ಲಿ ವಾದಿಸಲು ಮತ್ತು ಕೌಶಲ್ಯ ಮೆರೆಯಲು ಬೋಪಣ್ಣ ಸದಾ ಅವಕಾಶ ನೀಡುತ್ತಿದ್ದರು ಎಂದು ಹೇಳಿದರು.
ಕ್ರಿಕೆಟ್ ಅಭಿಮಾನಿಯಾಗಿರುವ ಎ.ಎಸ್. ಬೋಪಣ್ಣ ತಮ್ಮ ಮಾತುಗಳಲ್ಲೂ ಸಚಿನ್, ಕ್ರಿಕೆಟ್‌ನ್ನು ಉಲ್ಲೇಖಿಸಿದರು. ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ನೂರು ಶತಕ ಬಾರಿಸಿದರೂ ಹೊಸ ಸ್ಕೋರ್ ಆರಂಭವಾಗುವುದು ಶೂನ್ಯದಿಂದಲೇ ಎಂಬ ಮಾತನ್ನು ಪ್ರಸ್ತಾಪಿಸಿದರು.
2006ರ ಜನವರಿ 6ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದ ಬೋಪಣ್ಣ ಅವರು 2007ರ ಮಾರ್ಚ್ 1ರಂದು ಖಾಯಂ ನ್ಯಾಯಮೂರ್ತಿಗಳಾದರು. 2018ರ ಅಕ್ಟೋಬರ್ 29ರಂದು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಪದೋನ್ನತಿ ಪಡೆದುಕೊಂಡಿದ್ದರು.