ಸಾಕ್ಷ್ಯದ ಕೊರತೆ: ಅಧಿಕಾರಿ ವಿರುದ್ಧದ ಲಂಚದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ಸಾಕ್ಷ್ಯದ ಕೊರತೆ: ಅಧಿಕಾರಿ ವಿರುದ್ಧದ ಲಂಚದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿ ಎಸ್.ಎಂ. ಮಣ್ಣನ್ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಲಂಚದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಆರೋಪಿ ಅರ್ಜಿದಾರ ಮಣ್ಣನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸದ್ರಿ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಆರೋಪಿಯನ್ನು ಟ್ರ್ಯಾಪ್ ಮಾಡಿಲ್ಲ. ಶೋಧವನ್ನು ಕೂಡ ಕಾನೂನುಬದ್ಧವಾಗಿ ನಡೆಸಿಲ್ಲ. ಅರ್ಜಿದಾರರ ಫೋನ್ ಟ್ಯಾಪ್ ಮಾಡಲು ಅನುಮತಿಯನ್ನು ಪಡೆದಿಲ್ಲ. ಇವು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ದವಾಗಿದೆ. ಈ ಎಲ್ಲ ಅಂಶಗಳನ್ನು ಗಮಿಸಿದರೆ, ಲಕೋಟೆಯಲ್ಲಿ ಹಣ ಇತ್ತು ಎಂಬ ಸಿಬಿಐ ವಾದ ಅರ್ಜಿದಾರರಿಗೆ ಕಳಂಕ ತರಲು ಪ್ರಯತ್ನ ನಡೆಸಿದಂತಿದೆ ಎಂದು ಅಭಿಪ್ರಾಯಪಟ್ಟಿದೆ.
ತಾವು ಹಿರಿಯ ಅಧಿಕಾರಿಗಳ ನಿರ್ದೇಶನ ಪಾಲಿಸಿಲ್ಲ ಎಂಬ ಕಾರಣಕ್ಕೆ ದುರುದ್ದೇಶದಿಂದ ಈ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ ಫೋನ್ ಟ್ರ್ಯಾಪ್ ಮಾಡಿದ್ದು ಅಕ್ರಮ. ನಾನು ಲಂಚಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ಮತ್ತು ಲಂಚದ ಹಣ ಸ್ವೀಕರಿಸಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದರೆ, ಲಕೋಟೆಯಲ್ಲಿ ಹಣ ಇತ್ತು ಎಂದು ಸಿಬಿಐ ಹೇಳುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.