ಪೂರಕ ಆದೇಶಕ್ಕೆ ಪ್ರಭಾವ ಬೀರಿದ ಕೋರ್ಟ್ ಸಿಬ್ಬಂದಿ: ದಿಟ್ಟ ಆದೇಶ ಹೊರಡಿಸಿ ಮಾದರಿಯಾದ ನ್ಯಾಯಾಧೀಶರು!
ಪೂರಕ ಆದೇಶಕ್ಕೆ ಪ್ರಭಾವ ಬೀರಿದ ಕೋರ್ಟ್ ಸಿಬ್ಬಂದಿ: ದಿಟ್ಟ ಆದೇಶ ಹೊರಡಿಸಿ ಮಾದರಿಯಾದ ನ್ಯಾಯಾಧೀಶರು!
ಪ್ರಕರಣವೊಂದರಲ್ಲಿ ಪೂರಕವಾದ ಆದೇಶ ಹೊರಡಿಸುವಂತೆ ಕೋರ್ಟ್ ಸಿಬ್ಬಂದಿ ಪ್ರಭಾವ ಬೀರಿದ ಹಿನ್ನೆಲೆಯಲ್ಲಿ ದಿಟ್ಟ ಆದೇಶ ಹೊರಡಿಸಿ ರಾಜ್ಯದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮಾದರಿಯಾದ ಹೆಜ್ಜೆಯನ್ನು ಇಟ್ಟಿದ್ದಾರೆ.
ಆನೇಕಲ್‌ನ ನ್ಯಾಯಾಧೀಶರು ತೋರಿದ ದಿಟ್ಟತನ ಮತ್ತು ಅವರ ಈ ಆದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ನ್ಯಾಯವ್ಯವಸ್ಥೆಗೆ ಮಸಿ ಬಳಿಯಲು ಯತ್ನಿಸಿ ನ್ಯಾಯಾಲಯದ ಸಿಬ್ಬಂದಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ಎಪ್ರಿಲ್ 27, 2024ರಂದು ಈ ಆದೇಶ ಹೊರಡಿಸಲಾಗಿದೆ. ಮೂಲ ದಾವೆ(OS) 381/2020ರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ಉಭಯ ಪಕ್ಷಕಾರರ ಪರ ವಕೀಲರು ಗೈರು ಹಾಜರು. "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸಿಬ್ಬಂದಿಯೊಬ್ಬರು ನನ್ನನ್ನು ಸಂಪರ್ಕಿಸಿ ಪೂರಕವಾದ ಆದೇಶ ಹೊರಡಿಸುವಂತೆ ಪ್ರಭಾವ ಬೀರಿರುತ್ತಾರೆ. ನನ್ನ ಸಾಕ್ಷಿಪ್ರಜ್ಞೆ ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ನಾನು ಪ್ರಕರಣದ ನ್ಯಾಯವಿಚಾರಣೆಯಿಂದ ಹಿಂದೆ ಸರಿಯಲು ಬಯಸುತ್ತೇನೆ. ಆದುದರಿಂದ ಈ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ನಾನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ವಿನಮ್ರತಾಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದ್ಧೇನೆ. ಈ ಸಂಬಂಧ ಮನವಿಪತ್ರವನ್ನು ಕಳುಹಿಸುವಂತೆ ನಾನು ನ್ಯಾಯಾಲಯದ ಮುಖ್ಯ ಲಿಪಿಕಾಧಿಕಾರಿಯವರಿಗೆ ನಿರ್ದೇಶಿಸುತ್ತೇನೆ" ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಲಾಯಿತು.
ಪ್ರಕರಣ: ವಿನೀರ್ ಎಂಜಿನಿಯರಿಂಗ್ ಪ್ರೈ.ಲಿ. Vs ಸುಪ್ರಜಿತ್ ಎಂಜಿನಿಯರಿಂಗ್ ಲಿ.
ಆನೇಕಲ್ IV ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ