ಚಲಿಸುತ್ತಿರುವ ರೈಲಿನಿಂದ ಬಿದ್ದು ಮೃತಪಟ್ಟರೆ ಪರಿಹಾರಕ್ಕೆ ರೈಲ್ವೇ ಇಲಾಖೆಯೇ ಹೊಣೆ: ಕರ್ನಾಟಕ ಹೈಕೋರ್ಟ್
ಚಲಿಸುತ್ತಿರುವ ರೈಲಿನಿಂದ ಬಿದ್ದು ಮೃತಪಟ್ಟರೆ ಪರಿಹಾರಕ್ಕೆ ರೈಲ್ವೇ ಇಲಾಖೆಯೇ ಹೊಣೆ: ಕರ್ನಾಟಕ ಹೈಕೋರ್ಟ್
ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟರೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಹೊಣೆಗಾರಿಕೆ ರೈಲ್ವೇ ಇಲಾಖೆಗೆ ಇರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಮೃತರ ಕುಟುಂಬದ ವಾರಿಸುದಾರರಿಗೆ 4 ಲಕ್ಷ ರು. ಪರಿಹಾರವನ್ನು ಬಡ್ಡಿ ಸಹಿತ ನೀಡುವಂತೆ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಪರಿಹಾರದ ಮೊತ್ತವನ್ನು ಶೇ. 7ರ ಬಡ್ಡಿಯೊಂದಿಗೆ ಎಂಟು ವಾರದೊಳಗೆ ಪಾವತಿಸುವಂತೆ ತಾಕೀತು ಮಾಡಿದೆ.
ರಾಮನಗರದ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಘಟನೆಯ ವಿವರ:
ರೈಲು ಇಳಿಯುವಾಗ ಸಂಭವಿಸಿದ ಅಪಘಾತದಲ್ಲಿ ಜಯಮ್ಮ ಎಂಬವರು ಮೃತಪಟ್ಟಿದ್ದರು. ಈ ಬಗ್ಗೆ ಅವರ ಸಾವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೇ ಹಕ್ಕುಗಳ ನ್ಯಾಯಮಂಡಳಿ ತೀರ್ಪನ್ನು ಪ್ರಶ್ನಿಸಿದ ಅವರ ಕಾನೂನು ವಾರಿಸುದಾರರಾದ ರೋಜಮಣಿ ಮತ್ತಿತರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೃತ ಜಯಮ್ಮ ತನ್ನ ಸಹೋದರಿಯೊಂದಿಗೆ ಪ್ರಮಾದದಿಂದ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಕೆಳಗೆ ಇಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರ ಗಾಯೊಗಂಡು ಜಯಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನು ಪರಿಗಣಿಸಿ ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾಋ ನೀಡುವಂತೆ ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಆದರೆ, ಈ ಘಟನೆ ಆಕಸ್ಮಿಕವಾಗಿ ನಡೆದದ್ದಲ್ಲ. ಉದ್ದೇಶಪೂರ್ವಕ ಎಂದು ರೈಲ್ವೇ ಇಲಾಖೆ ಹೇಳೀದರೂ ತನ್ನ ವಾದವನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರ ಒಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೇ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ರದ್ದು ಮಾಡುವಂತೆ ಅರ್ಜಿದಾರರು ವಾದಿಸಿದ್ದರು.
ಮೃತ ಮಹಿಳೆ ತಪ್ಪಾಗಿ ಬೇರೆ ರೈಲು ಹತ್ತಿದ್ದರು. ಆಗ ಅವರು ಒಂದೋ ಪ್ರಯಾಣ ಮುಂದುವರಿಸಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವೇ ಅಲಾರ್ಮ್ ಚೈನ್ ಎಳೆಯಬೇಕು. ಅದೆರಡನ್ನೂ ಮಾಡದೆ ರೈಲಿನಿಂದ ಇಳಿಯುಲು ಪ್ರಯತ್ನಿಸಿ ಸ್ವಯಂ ಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ. ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಹೇಳಲಾಗದು. ಆದುದರಿಂದ ರೈಲ್ವೇ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೇ ಇಲಾಖೆ ಪ್ರತಿವಾದ ಮಂಡಿಸಿತ್ತು.
ಆದರೆ, ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಪ್ರಯಾಣಿಕರು ಮೃತಪಟ್ಟರೆ ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸುವುದು ರೈಲ್ವೇ ಇಲಾಖೆಯ ಹೊಣೆಗಾರಿಕೆಯಾಗಿದೆ ಎಂದು ನ್ಯಾಯಪೀಠ ತೀರ್ಮಾನಿಸಿತು. ಅದರಂತೆ, ಅರ್ಜಿದಾರರಿಗೆ 4 ಲಕ್ಷ ರು. ಪರಿಹಾರವನ್ನು ಬಡ್ಡಿ ಸಹಿತ ನೀಡಬೇಕು ಹಾಗೂ ಪರಿಹಾರದ ಮೊತ್ತವನ್ನು ಶೇ. 7ರ ಬಡ್ಡಿಯೊಂದಿಗೆ ಎಂಟು ವಾರದೊಳಗೆ ನೀಡುವಂತೆ ರೈಲ್ವೇ ಇಲಾಖೆಗೆ ನಿರ್ದೇಶಿಸಿ ಆದೇಶ ಹೊರಡಿಸಿದೆ.