ಉಲ್ಟಾ ಹೊಡೆದ ಕೇಸ್: ಅತ್ಯಾಚಾರ ಕೇಸು ದಾಖಲಿಸಿದ ಮಹಿಳೆಗೆ ಜೈಲು ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ!
ಉಲ್ಟಾ ಹೊಡೆದ ಕೇಸ್: ಅತ್ಯಾಚಾರ ಕೇಸು ದಾಖಲಿಸಿದ ಮಹಿಳೆಗೆ ಜೈಲು ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ!
ತನ್ನ ಮೇಲೆ ಅತ್ಯಾಚಾರ ನಡೆದಿದೆ ಸುಳ್ಳು ಕೇಸು ಕೇಸು ದಾಖಲಿಸಿದ ಮಹಿಳೆಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದ್ದು, ಸುಳ್ಳು ಕೇಸು ದಾಖಲಿಸಿದ ದೂರುದಾರರಿಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ಮತ್ತು 5.9 ಲಕ್ಷ ರೂ. ದಂಡ ವಿಧಿಸಿ ತೀರ್ಪು ಹೊರಡಿಸಿದೆ.
ಉತ್ತರ ಪ್ರದೇಶದ ಬರೇಲಿಯ 14ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಜ್ಞಾನೇಂದ್ರ ತಿಪಾಠಿ ಅವರು ಈ ತೀರ್ಪು ನೀಡಿದ್ಧಾರೆ.
ಮಹಿಳೆಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1653 ದಿನಗಳ (4 ವರ್ಷ 6 ಆರು ತಿಂಗಳು 8 ದಿನಗಳ) ಜೈಲು ಶಿಕ್ಷೆ ವಿಧಿಸಿದ್ದಾರೆ.
ಆಕೆಯ ಸುಳ್ಳು ದೂರಿನಿಂದಾಗಿ ಅತ್ಯಾಚಾರದ ಆರೋಪದಡಿ ಶಿಕ್ಷೆಗೆ ಒಳಗಾಗಿದ್ದ ವ್ಯಕ್ತಿ ಕೂಡ ತನ್ನದಲ್ಲದ ತಪ್ಪಿಗೆ ಇಷ್ಟೇ ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ. ಹೀಗಾಗಿ ನ್ಯಾಯಾಧೀಶರು ಅಷ್ಟೇ ದಿನಗಳ ಕಾಲ ಮಹಿಳೆಗೂ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಶಿಕ್ಷೆಗೆ ಗುರಿಯಾಗಿರುವ ಮಹಿಳೆಗೆ ವಿಧಿಸಿರುವ ದಂಡದ ಮೊತ್ತ 5.9 ಲಕ್ಷ ರೂ.ಗಳನ್ನು ಸುಳ್ಳು ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಪರಿಹಾರ ಪಾವತಿಸದೇ ಇದ್ದರೆ ಹೆಚ್ಚುವರಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣ: ಉತ್ತರ ಪ್ರದೇಶ ರಾಜ್ಯ Vs ನಿಶಾ (ಅಲಹಾಬಾದ್ ಹೈಕೋರ್ಟ್)
ಪ್ರಕರಣದ ಹಿನ್ನೆಲೆ
2018ರಲ್ಲಿ ಅಜಯ್ ಕುಮಾರ್ ಎಂಬವರು ತನ್ನ ಸಹೋದ್ಯೋಗಿಯ ಸೋದರಿಯನ್ನು ಅಪಹರಿಸಿದ ಮತ್ತು ಅತ್ಯಾಚಾರ ಎಸಗಿದ ಆರೋಪಕ್ಕೆ ಸಿಲುಕಿ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಆಗ ಅಪ್ರಾಪ್ತೆಯಾಗಿದ್ದ ಯುವತಿ ತನ್ನ ಮೇಲೆ ಅಜಯ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದರು. ಹೀಗಾಗಿ ಅಜಯ್ ಜೈಲುಪಾಲಾಗಿದ್ದರು.
ಪ್ರಕರಣದ ಅಡ್ಡ ವಿಚಾರಣೆಯ ವೇಳೆ ಅಜಯ್ ಅತ್ಯಾಚಾರ ಎಸಗಿಲ್ಲ ಎಂಬುದು ಬೆಳಕಿಗೆ ಬಂದಿತು. ಖುದ್ದು ಯುವತಿ ತಾನು ಯಾವುದೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿಲ್ಲ ಮತ್ತು ತನ್ನ ಮೇಲೆ ಯಾವುದೇ ರೀತಿಯ ಅತ್ಯಾಚಾರ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ನಂತರ ನ್ಯಾಯಾಲಯ ಆಕೆಯ ವಿರುದ್ಧ CRPC ಸೆಕ್ಷನ್ 195ರ ಅಡಿಯಲ್ಲಿ ಅಭಿಯೋಜನೆ ನಡೆಸಲು ಆದೇಶ ನೀಡಿತ್ತು.
ವಿಚಾರಣೆ ವೇಳೆ ಸಂತ್ರಸ್ತೆ ದೂರಿದ್ದ ಯುವತಿಯ ಅಪಹರಣವಾಗಲೀ, ಅತ್ಯಾಚಾರವಾಗಲೀ ನಡೆದಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ, ಆರೋಪಿಯಾಗಿದ್ದ ವ್ಯಕ್ತಿ ಅನುಭವಿಸಿದಷ್ಟೇ ಸಮಯ ಜೈಲು ಶಿಕ್ಷೆಯನ್ನು ಸುಳ್ಳು ದೂರು ನೀಡಿದ ಮಹಿಳೆಗೂ ವಿಧಿಸಿತು. ಅಲ್ಲದೆ ಆರೋಪಿಯಾಗಿದ್ದ ಅಜಯ್‌ನನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ 2024ರ ಮೇ 4ರಂದು ಆದೇಶ ನೀಡಿದೆ.