ಹಳೆ ಬಿಲ್ ಪಾವತಿ ತಪ್ಪಿಸಲು ಸರ್ಕಾರಿ ಅಧಿಕಾರಿಗಳ ವಿರುದ್ಧ ಫೇಕ್ ಕೇಸ್: ಸ್ಥಾನ ದುರುಪಯೋಗ ಮಾಡಿದ ಜಡ್ಜ್ ವಿರುದ್ಧ ಕಿಡಿ ಕಾರಿದ ಹೈಕೋರ್ಟ್
ಹಳೆ ಬಿಲ್ ಪಾವತಿ ತಪ್ಪಿಸಲು ಸರ್ಕಾರಿ ಅಧಿಕಾರಿಗಳ ವಿರುದ್ಧ ಫೇಕ್ ಕೇಸ್: ಸ್ಥಾನ ದುರುಪಯೋಗ ಮಾಡಿದ ಜಡ್ಜ್ ವಿರುದ್ಧ ಕಿಡಿ ಕಾರಿದ ಹೈಕೋರ್ಟ್
ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣದ ದಾಖಲಿಸಿದ ನ್ಯಾಯಾಧೀಶರೊಬ್ಬರ ವಿರುದ್ಧ ಹೈಕೋರ್ಟ್ ಕಿಡಿ ಕಾರಿದ ಪ್ರಸಂಗ ನಡೆದಿದೆ.
ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಭಗವಾನ್ ದಾಸ್ ಗುಪ್ತಾ ಅವರು ಅಲಹಾಬಾದ್ ಹೈಕೋರ್ಟ್‌ನಿಂದ ಛೀಮಾರಿಗೊಳಗಾದ ನ್ಯಾಯಾಧೀಶರು. ಅವರು ಉತ್ತರ ಪ್ರದೇಶದ ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣದ ದಾಖಲಿಸಲು ತಮ್ಮ ಸ್ಥಾನವನ್ನು ದುರುಪಯೋಗ ಮಾಡಿದ್ದರು.
ಇದನ್ನು ಗಮನಿಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾ. ರಾಹುಲ್ ಚತುರ್ವೇದಿ ಮತ್ತು ನ್ಯಾ. ಅಜರ್ ಹುಸೇನ್ ಇದ್ರಿಸ್ ಅವರಿದ್ದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ಭಗವಾನ್ ದಾಸ್ ಗುಪ್ತಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಬಂಡಾ ಜಿಲ್ಲೆಯ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಭಗವಾನ್ ದಾಸ್ ಗುಪ್ತಾ ಅವರು ತಮ್ಮ ಸ್ಥಾನ ದುರುಪಯೋಗ ಮಾಡಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ಧ ವಂಚನೆ, ಮೋಸ, ಸಾಕ್ಷ್ಯ ತಿರುಚುವಿಕೆ ಹಾಗೂ ಸುಲಿಗೆ ಸೇರಿದಂತೆ ಸುಳ್ಳು ಹಾಗೂ ವ್ಯವಸ್ಥಿತ ಆರೋಪ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಕ್ರಿಮಿನಲ್ ಮೊಕದ್ದಮೆ ಸಂಪೂರ್ಣ ಸುಳ್ಳು ಎಂದು ಜಡ್ಜ್ ವಿರುದ್ಧ ಹೈಕೋರ್ಟ್ ನ್ಯಾಯಪೀಠ ಕಿಡಿ ಕಾರಿದೆ.
ತಮ್ಮ ಅಧಿಕಾರದ ಮದ ಹಾಗೂ ಗೌರವಯುತ ಸ್ಥಾನದ ಮೌಲ್ಯವನ್ನು ಮರೆತು ಕೀಳುದರ್ಜೆಯ ನಾಗರಿಕರಂತೆ ಈ ಮೊಕದ್ದಮೆ ಹೂಡಿದ್ದಾರೆ. ಸರ್ಕಾರಿ ನೌಕರರಿಗೆ ಪಾಠ ಕಲಿಸುವ ಏಕೈಕ ಕೆಟ್ಟ ಉದ್ದೇಶದಿಂದ ಈ ರೀತಿ ಮಾಡಿರುವುದು ಸರ್ವಥಾ ಒಪ್ಪತಕ್ಕದ್ದಲ್ಲ ಎಂದು ನ್ಯಾಯಪೀಠ ಹೇಳಿದ್ದು, ಅಧಿಕಾರಿಗಳ ವಿರುದ್ಧ ಹೂಡಲಾದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಕೊಲೆ, ಆತ್ಮಹತ್ಯೆ, ಅತ್ಯಾಚಾರ, ವರದಕ್ಷಿಣೆ ಸಾವು, ಡಕಾಯಿತಿ ಅಥವಾ ಇತರ ಲೈಂಗಿಕ ಅಪರಾಧಗಳಂತಹ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ದೂರು ದಾಖಲಿಸುವ ಮುನ್ನ ವಿಚಾರಣಾ ಹಾಗೂ ಕೆಳ ಹಂತದ ನ್ಯಾಯಾಧೀಶರು ಮೊದಲಿಗೆ ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆಯುವ ಅಗತ್ಯವಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.
ಸಿಜೆಎಂ ಭಗವಾನ್ ದಾಸ್ ಗುಪ್ತಾ ಮನೆಯೊಂದನ್ನು ಖರೀದಿಸಿದ್ದರು. ಆ ಮನೆಯ ವಿದ್ಯುತ್ ಖಾತೆಯನ್ನು ತಮ್ಮ ಹೆಸರಿಗೆ ಪರಿವರ್ತಿಸುವಂತೆ ವಿದ್ಯುತ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆಗ, ಆ ಮನೆಗೆ ಸಂಬಂಧಿಸಿದಂತೆ ರೂ. 1,66,916/- ಮೊತ್ತದ ಹಳೆಯ ಬಿಲ್ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದರು.
ಇದರಿಂದ ಆಘಾತಕ್ಕೊಳಗಾದ ಮ್ಯಾಜಿಸ್ಟೇಟರು ಮನೆಯ ಹಿಂದಿನ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 420, 463, 467, 468, 504, 506ರ ಅಡಿಯಲ್ಲಿ ದೂರು ದಾಖಲಿಸಿದರು.
ಈ ದೂರಿನ ಆಧರಿಸಿ ವಿದ್ಯುತ್ ಖಾತೆ ಪರಿವರ್ತನೆ ಮಾಡಬೇಕು ಎಂದು ಜಡ್ಜ್ ಇಲಾಖೆಗೆ ಮನವಿ ಮಾಡಿದರು. ಆದರೆ, ಹಿಂದಿನ ಮಾಲೀಕರು ಮತ್ತು ಜಡ್ಜ್ ನಡುವಿನ ವಿವಾದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ ಅಧಿಕಾರಿಗಳು ಹೊಸ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಬಾಕಿ ಮೊತ್ತ ಸಂಪೂರ್ಣ ಪಾವತಿಸುವಂತೆ ತಿಳಿಸಿದರು.
ಲಕ್ನೋ ವಿಚಾರಣಾ ನ್ಯಾಯಾಲಯ ಮಹತ್ವದ ಲೋಪ ಕಂಡುಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧದ ಪ್ರಕರಣ ಕೈಬಿಟ್ಟಿತು. ಇದನ್ನು ಪ್ರಶ್ನಿಸಿ ನ್ಯಾ. ಗುಪ್ತಾ ವಿದ್ಯುತ್ ಒಂಬುಡ್ಸಮನ್‌ಗೆ ದೂರು ನೀಡಿದರೂ ನಿರೀಕ್ಷಿತ ಪರಿಹಾರ ದೊರೆಯಲಿಲ್ಲ. ಇದರಿಂದ ಅಂತಿಮವಾಗಿ 2023ರಲ್ಲಿ ವೈಯಕ್ತಿಕ ನೆಲೆಯಲ್ಲಿ ಜಡ್ಜ್ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಿಕೊಂಡರು. ಇದನ್ನು ಪ್ರಶ್ನಿಸಿ ಸರ್ಕಾರಿ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣ: ಮನೋಜ್ ಕುಮಾರ್ ಗುಪ್ತಾ Vs ಉತ್ತರ ಪ್ರದೇಶ (ಅಲಹಾಬಾದ್ ಹೈಕೋರ್ಟ್)