ನಿಗದಿಗಿಂತ ಕಡಿಮೆ ತೂಕದ ಬಿಸ್ಕೆಟ್ ಮಾರಾಟ: ಬ್ರಿಟಾನಿಯಾ ಸಂಸ್ಥೆಗೆ 60 ಸಾವಿರ ದಂಡ
ನಿಗದಿಗಿಂತ ಕಡಿಮೆ ತೂಕದ ಬಿಸ್ಕೆಟ್ ಮಾರಾಟ: ಬ್ರಿಟಾನಿಯಾ ಸಂಸ್ಥೆಗೆ 60 ಸಾವಿರ ದಂಡ
ಪ್ಯಾಕೇಟ್‌ನಲ್ಲಿ ನಮೂದಿಸಿದ ಪ್ರಮಾಣಕ್ಕಿಂತ ಕಡಿಮೆ ತೂಕದ ಬಿಸ್ಕೆಟ್ ಪ್ಯಾಕೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಪ್ರಖ್ಯಾತ ಬಿಸ್ಕೆಟ್ ತಯಾರಕ ಬ್ರಿಟಾನಿಯಾ ಕಂಪೆನಿಗೆ ಗ್ರಾಹಕ ನ್ಯಾಯಾಲಯ 60 ಸಾವಿರ ರೂ. ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.
ಕೇರಳದ ತ್ರಿಶ್ಶೂರ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಈ ತೀರ್ಪು ನೀಡಿದೆ. ಅಧ್ಯಕ್ಷ ಸಿ.ಟಿ. ಸಾಬು, ಸದಸ್ಯರಾದ ಶ್ರೀಜಾ ಎಸ್. ಮತ್ತುರಾಮಮೋಹನ್ ಆರ್. ಅವರಿದ್ದ ನ್ಯಾಯಪೀಠ ತೀರ್ಪು ನೀಡಿದೆ.
ಬ್ರಿಟಾನಿಯಾ ನ್ಯೂಟ್ರಿ ಚಾಯ್ಸ್ ಥಿನ್ ಆರೋ ರೂಟ್ ಬಿಸ್ಕೆಟ್ ನ ಎರಡು ಪ್ಯಾಕೇಟ್‌ಗಳನ್ನು ದೂರುದಾರ ಜಾರ್ಜ್ ಥಟ್ಟಿಲ್ ಎಂಬವರು ಖರೀದಿಸಿದ್ದರು. ಮುದ್ರಣದ ಪ್ರಕಾರ ಪ್ರತಿ ಪ್ಯಾಕೇಟ್ ತಲಾ 300 ಗ್ರಾಮ್ ತೂಕ ಇರಬೇಕಿತ್ತು. ಆದರೆ, ಕುತೂಹಲಕ್ಕೆ ಪರೀಕ್ಷಿಸಿದಾಗ ಅದರ ತೂಕ ಕ್ರಮವಾಗಿ 268 ಗ್ರಾಂ ಮತ್ತು 248 ಗ್ರಾಂ ಇತ್ತು.
ಜಾರ್ಜ್ ಅವರು ತ್ರಿಶ್ಶೂರ್ ಕಾನೂನು ಮಾಪನಶಾಸ್ತ್ರದ ಸಂಚಾರಿ ದಳದ ಸಹಾಯಕ ನಿಯಂತ್ರಕರಿಗೆ ದೂರು ಸಲ್ಲಿಸಿದರು. ಅವರ ದೂರನ್ನು ಸ್ವೀಕರಿಸಿದ ಸಂಚಾರಿ ದಳದ ಅಧಿಕಾರಿಗಳು, ಬ್ರಿಟಾನಿಯಾ ಬಿಸ್ಕೆಟ್ ಪ್ಯಾಕೇಟ್‌ನ ತೂಕ ಕಡಿಮೆ ಇರುವುದನ್ನು ದೃಢಪಡಿಸಿದರು.
ಈ ದೃಢೀಕರಣ ಪತ್ರದೊಂದಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ ಜಾರ್ಜ್ ಥಟ್ಟಿಲ್, ತನಗೆ ಆರ್ಥಿಕ, ದೈಹಿಕ ಹಾಗೂ ಮಾನಸಿಕ ನಷ್ಟ ಉಂಟಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟರು.
ನೋಟೀಸ್ ನೀಡಿದ ನಂತರವೂ ಬ್ರಿಟಾನಿಯಾ ಮತ್ತು ಬೇಕರಿ ತಮ್ಮ ಲಿಖಿತ ಹೇಳಿಕೆ ನೀಡಲು ವಿಫಲವಾಗಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ ಏಕಪಕ್ಷೀಯ ಆದೇಶವನ್ನು ನೀಡಿತು.
ತಯಾರಕರು ಮತ್ತು ಮಾರಾಟಗಾರರಿಬ್ಬರೂ ಅನ್ಯಾಯದ ವ್ಯಾಪಾರಿ ಅಭ್ಯಾಸದಲ್ಲಿ ತೊಡಗಿದ್ದು, ಇದು ಗ್ರಾಹಕ ಸಂರಕ್ಷಣಾ ಕಾಯಿದೆ ಮತ್ತು ಕಾನೂನು ಮಾಪನ ಶಾಸ್ತ್ರದ ಕಾಯ್ದೆ 2009ರ ಸೆಕ್ಷನ್ 30ರ (ಪ್ರಮಾಣ ಮತ್ತು ಅಳತೆಗೆ ವಿರುದ್ಧವಾದ ವಹಿವಾಟಿಗೆ ದಂಡ) ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಹೇಳಿದೆ.