ಪ್ರಯಾಣಿಕರಿಗೆ ಟಿಕೆಟ್ ನೀಡದೆ ಕರ್ತವ್ಯಲೋಪ: KSRTC ಕಂಡೆಕ್ಟರ್ ವಜಾ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಪ್ರಯಾಣಿಕರಿಗೆ ಟಿಕೆಟ್ ನೀಡದೆ ಕರ್ತವ್ಯಲೋಪ: KSRTC ಕಂಡೆಕ್ಟರ್ ವಜಾ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಪ್ರಯಾಣಿಕರಿಗೆ ಟಿಕೆಟ್ ನೀಡದೆ ಕರ್ತವ್ಯ ಲೋಪ ಮಾಡಿದ ಆರೋಪ ಸಾಬೀತಾದ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಒಬ್ಬರು ನಿರ್ವಾಹಕ (ಕಂಡೆಕ್ಟರ್)ರನ್ನು ವಜಾಗೊಳಿಸಿದ್ದು, ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ.. ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅದೇಶ ಹೊರಡಿಸಿದೆ.
ನಿರ್ವಾಹಕನನ್ನು ವಜಾಗೊಳಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಆದೇಶವನ್ನು ಕಾರ್ಮಿಕ ನ್ಯಾಯಾಲಯ ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ KSRTCಯ ವಿಭಾಗೀಯ ನಿಯಂತ್ರಣಾಧಿಕಾರಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು.
KSRTCಯಲ್ಲಿ ನಿರ್ವಾಹಕನಾಗಿದ್ದ ಕಾರ್ಮಿಕನಿಗೆ ಸಂಸ್ಥೆ ವೇತನ ಮತ್ತು ಸವಲತ್ತುಗಳನ್ನು ನೀಡಿದೆ. ಆದರೆ, ಅವರು ಸಂಸ್ಥೆಗೆ ತನ್ನ ಪ್ರಾಮಾಣಿಕ ಸೇವೆಯನ್ನು ನೀಡಿಲ್ಲ. ಬದಲಿಗೆ, ಪ್ರಯಾಣಿಕರಿಗೆ ಟಿಕೆಟ್ ನೀಡದೆ ಹಣವನ್ನೂ ಸಂಗ್ರಹಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಇಂತಹುದೇ ಲೋಪಗಳನ್ನು ಹಲವು ಬಾರಿ ಎಸಗಿದ್ದಾರೆ. 122 ಬಾರಿ ಕರ್ತವ್ಯ ಲೋಪ ಎಸಗಿರುವ ಆರೋಪ ಹೊತ್ತಿರುವ ನಿರ್ವಾಹಕನಿಗೆ ಅನುಕಂಪ ತೋರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ತನ್ನ ನಿರ್ವಾಹಕನನ್ನು ವಜಾಗೊಳಿಸಿದ ಕೆಎಸ್‌ಆರ್‌ಟಿಸಿಯ ಆದೇಶ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ನ್ಯಾಯಪೀಠ, ಇಂತಹ ಕಾರ್ಮಿಕನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವಂತೆ ಮೈಸೂರಿನ ಕಾರ್ಮಿಕ ನ್ಯಾಯಾಲಯ ನೀಡಿದ ತೀರ್ಪು ದೋಷಪೂರಿತವಾಗಿದೆ ಎಂದು ಈ ಆದೇಶವನ್ನು ರದ್ದುಗೊಳಿಸಿದೆ.