ಪಾಟೀ ಸವಾಲಿನಲ್ಲಿ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ಹೇಳಿದರೂ ಆರೋಪಿಗೆ ಶಿಕ್ಷೆ: ಸುಪ್ರೀಂ ಕೋರ್ಟ್
ಪಾಟೀ ಸವಾಲಿನಲ್ಲಿ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ಹೇಳಿದರೂ ಆರೋಪಿಗೆ ಶಿಕ್ಷೆ: ಸುಪ್ರೀಂ ಕೋರ್ಟ್
ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ ಸಂತ್ರಸ್ತೆ ಪಾಟೀ ಸವಾಲಿನಲ್ಲಿ ತನ್ನ ಮಾತು ಬದಲಿಸಿ ಪ್ರತಿಕೂಲ ಸಾಕ್ಷ್ಯ ಹೇಳಿದರೂ, ಆ ಸಾಕ್ಷಿ ಮೊದಲು ಹೇಳಿದ್ದ ಮಾತುಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದ್ದು, ಸಾಮೂಹಿಕ ಅತ್ಯಾಚಾರದ ಅಪರಾಧಕ್ಕಾಗಿ ನೀಡಿದ್ದ 10 ವರ್ಷಗಳ ಅಪರಾಧದ ಶಿಕ್ಷೆಯನ್ನು ಎತ್ತಿಹಿಡಿಯಿತು.
ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಿದ ದಿನಕ್ಕೂ ಮೊದಲ ಬಾರಿಗೆ ಅವರನ್ನು ಪ್ರಶ್ನೆಗೆ ಗುರಿಪಡಿಸಿದ ದಿನಕ್ಕೂ ದೀರ್ಘ ಅಂತರ ಇರುವ ಕಾರಣಕ್ಕೆ ಆರೋಪಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ದಾರೆ ಅನಿಸುತ್ತಿದೆ. ಹೀಗಾಗಿ ಸಾಕ್ಷಿಗಳು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ಮೊದಲ ಬಾರಿಗೆ ನೀಡಿದ ಮಾಹಿತಿಯಲ್ಲಿ ಅವರು ಆರೋಪಿಗಳ ವಿರುದ್ಧ ಆರೋಪ ಹೊರಿಸುವ ಕೆಲಸ ಮಾಡಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಮದ್ರಾಸ್ ಹೈಕೋರ್ಟ್ ಮತ್ತು ವೆಲ್ಲೋರ್ ವಿಚಾರಣಾ ನ್ಯಾಯಾಲಯ ಆರೋಪಿಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸೆಲ್ವಮಣಿ ಎಂಬವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮೇಲ್ಮನವಿಯನ್ನು ವಜಾ ಮಾಡಿ ಶಿಕ್ಷೆಯನ್ನು ಖಾಯಂಗೊಳಿಸಿತು.
ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಾಕ್ಷಿಯಾಗಿರುವ ಸಂಬಂಧಿಯು ಪಾಟೀ ಸವಾಲಿನ ವೇಳೆ ಪ್ರಾಸಿಕ್ಯೂಷನ್ ಪರವಾಗಿ ಮಾತನಾಡಿಲ್ಲ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ಪುರಾವೆಯನ್ನು ಎಫ್‌ಐಆರ್ ಜೊತೆಗೆ ಪರಿಶೀಲಿಸಿದಾಗ, ಸಿಆರ್‌ಪಿಸಿ ಸೆಕ್ಷನ್ 164 ಅಡಿ ದಾಖಲಿಸಿದ ಹೇಳಿಕೆಯ ಜೊತೆಗೆ ಹೋಲಿಸಿದಾಗ, ವೈದ್ಯಕೀಯ ತಜ್ಞರ ಪುರಾವೆ ಜೊತೆಗೆ ಪರಿಶೀಲಿಸಿದಾಗ ಮಹಿಳೆಯು ಮೊದಲ ಬಾರಿಗೆ ಹೇಳಿಕೆ ನೀಡಿದಾಗ ಇದ್ದ ವಿವರಣೆಗೆ ಹೊಂದಿಕೆ ಆಗುತ್ತದೆ ಎಂದು ನ್ಯಾಯಪೀಠ ಹೇಳಿದೆ.