ಕರ್ನಾಟಕ ಹೈಕೋರ್ಟ್ ಕೇಸ್ ಬಗ್ಗೆ ಮಾಹಿತಿ ಬೇಕೇ? ಹೊಸ ವೆಬ್‌ಸೈಟ್ ಮೂಲಕ ಬೆರಳ ತುದಿಯಲ್ಲೇ ಸಿಗಲಿದೆ ನಿಖರ, ಸುಲಭ ಮಾಹಿತಿ
ಕರ್ನಾಟಕ ಹೈಕೋರ್ಟ್ ಕೇಸ್ ಬಗ್ಗೆ ಮಾಹಿತಿ ಬೇಕೇ? ಹೊಸ ವೆಬ್‌ಸೈಟ್ ಮೂಲಕ ಬೆರಳ ತುದಿಯಲ್ಲೇ ಸಿಗಲಿದೆ ನಿಖರ, ಸುಲಭ ಮಾಹಿತಿ
ಕರ್ನಾಟಕ ಹೈಕೋರ್ಟ್ ಕೇಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಹೊಸ ಅಂತರ್ಜಾಲವನ್ನು ಆರಂಭಿಸಲಾಗಿದೆ. ಕೇಸುಗಳ ಸ್ಥಿತಿಗತಿ ಕುರಿತ ಎಲ್ಲ ವಿಚಾರಗಳೂ ಇನ್ನು ಮುಂದೆ ಹೊಸ ವೆಬ್‌ಸೈಟ್ ಮೂಲಕ ಸಾರ್ವಜನಿಕರಿಗೆ ಬೆರಳ ತುದಿಯಲ್ಲೇ ಸಿಗಲಿದೆ.
ಹಾಲಿ ಇರುವ ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ತೀರ್ಪುಗಳು ಹಾಗೂ ಅಧಿಸೂಚನೆ ಸೇರಿದಂತೆ ವಿವಿಧ ಅಂಶಗಳು ದೊರೆಯುತ್ತಿವೆ. ಈಗ ಹೊಸ ಅಂಶಗಳೊಂದಿಗೆ ನೂತನ ವೆಬ್‌ಸೈಟ್ ಸಿದ್ಧಪಡಿಸಲಾಗಿದೆ.
ಕರ್ನಾಟಕ ಹೈಕೋರ್ಟ್‌ನ ಪ್ರತಿದಿನ ದಾಖಲಾಗುವ, ವಿಲೇವಾರಿಯಾಗುವ ಮತ್ತು ವಿಲೇವಾರಿಗೆ ಬಾಕಿ ಇರುವ ಅರ್ಜಿಗಳ ಸಂಪೂರ್ಣ, ನಿಖರ ಹಾಗೂ ಸದ್ಯದ ಪರಿಸ್ಥಿತಿಯ ಮಾಹಿತಿಗಳು ಈ ವೆಬ್‌ಸೈಟ್ ಮೂಲಕ ದೊರೆಯಲಿದೆ.
ನೂತನ ವೆಬ್‌ಸೈಟ್‌ನಲ್ಲಿ ಹಲವು ನೂತನ ಅಂಶಗಳು ಒಳಗೊಂಡಿದೆ. ಹೈಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳ ಅಂಕಿ ಅಂಶ ವಿವರ ಒದಗಿಸುವ ವಿಭಾಗವೂ ಇದೆ. ಹಾಲಿ ಇರುವ ವೆಬ್‌ಸೈಟ್‌ನಲ್ಲಿ ಕೇವಲ ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿ ಇರುವ ಮತ್ತು ನಿತ್ಯ ದಾಖಲಾಗುವ ಹಾಗೂ ವಿಲೇವಾರಿಯಾಗುತ್ತಿರುವ ಅರ್ಜಿಗಳ ಅಂಕಿ ಅಂಶವನ್ನು ಮಾತ್ರ ನೀಡಲಾಗುತ್ತಿದೆ.
ಹೈಕೋರ್ಟ್‌ನ ಎಲ್ಲ ಮೂರು ಪೀಠಗಳಲ್ಲಿ ವಿಚಾರಣೆಗೆ ನಿಗದಿಯಾಗಿರುವ ಮತ್ತು ವಿಲೇವಾರಿಗೆ ಬಾಕಿ ಇರುವ ಅರ್ಜಿಗಳಲ್ಲಿ ಒಂದರಿಂದ 20 ವರ್ಷ ಕಾಲ ಹಳೆಯ ಪ್ರಕರಣಗಳ ಅಂಕಿ ಅಂಶಗಳನ್ನೂ ನೀಡಲಾಗುತ್ತಿದೆ.
ಜಿಲ್ಲಾ ನ್ಯಾಯಾಲಯಗಳಲ್ಲಿ 20 ಲಕ್ಷ ಪ್ರಕರಣಗಳು ಬಾಕಿ!
ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಒಟ್ಟು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ವಿಲೇವಾರಿಗೆ ಬಾಕಿ ಇದೆ. ಬೆಂಗಳೂರಿನ ಪ್ರಧಾನ ಪೀಠದಲ್ಲಿ ಸುಮಾರು 2 ಲಕ್ಷ ಅರ್ಜಿಗಳು ಬಾಕಿ ಇವೆ. ಇನ್ನು ಧಾರವಾಡ ಪೀಠದಲ್ಲಿ 62 ಸಾವಿರಕ್ಕೂ ಅಧಿಕ ಹಾಗೂ ಕಲ್ಬುರ್ಗಿ ಪೀಠದಲ್ಲಿ 26 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ.
ನೂತನ ವೆಬ್‌ಸೈಟ್ ಲಿಂಕ್ ಹೀಗಿದೆ.
https://karnatakajudiciary.kar.nic.in/newwebsite/index.php