ಮಾನಹಾನಿ ಪ್ರಕರಣದ ಕಾಗ್ನಿಜೆನ್ಸ್‌ಗೆ ಕಾಲಮಿತಿ: ಅವಧಿ ಮೀರಿದ ಪ್ರಕರಣದಲ್ಲಿ ಶಿಕ್ಷೆ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಮಾನಹಾನಿ ಪ್ರಕರಣದ ಕಾಗ್ನಿಜೆನ್ಸ್‌ಗೆ ಕಾಲಮಿತಿ: ಅವಧಿ ಮೀರಿದ ಪ್ರಕರಣದಲ್ಲಿ ಶಿಕ್ಷೆ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಮಾನಹಾನಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಳ್ಳಲು ಕಾಲಮಿತಿಯ ಅವಧಿ ಮೀರಿದ್ದು, ಸದ್ರಿ ಪ್ರಕರಣದಲ್ಲಿ ಹೊರಡಿಸಲಾದ ಶಿಕ್ಷೆಯ ತೀರ್ಪು ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾದ ಮೇಲ್ಮನವಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್‌ನ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ದಿನಾಂಕ 7-05-2024ರಂದು ಪ್ರಕಟಿಸಿದೆ.
ಪತ್ರಕರ್ತರೊಬ್ಬರ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಪ್ರಕರಣದ ಸಂಜ್ಞೆಯತೆಯನ್ನು (ಕಾಗ್ನಿಜೆನ್ಸ್) ಪಡೆದುಕೊಳ್ಳಲು ಏಳು ವರ್ಷಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದೆ. ಆ ಬಳಿಕ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಕಾಲಮಿತಿ ಮೀರಿದೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಮತ್ತು ಆ ಬಳಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಒಂದು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದದ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯ 3 ವರ್ಷದೊಳಗೆ ಸಂಜ್ಞೆಯತೆ(cognizance)ಯನ್ನು ತೆಗೆದುಕೊಳ್ಳಬೇಕು. ಇದು ಈಗಾಗಲೇ ನಿರೂಪಿಲ್ಪಟ್ಟ ನಿಯಮ.
ಸದ್ರಿ ಪ್ರಕರಣದಲ್ಲಿ ಈ ನಿಯಮ ಪಾಲಿಸದೆ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಹಾಗಾಗಿ ಕಾನೂನಿನ ಪರಿಭಾಷೆಯಲ್ಲಿ ಇದು ಕೆಟ್ಟದ್ದಾಗಿದೆ (The Order is taking congizance is bad in law) ಹಾಗಾಗಿ, ಇತರ ವಿಷಯಗಳ ಬಗ್ಗೆ ಎತ್ತಲಾದ ಪ್ರಶ್ನೆಗಳನ್ನು ಉತ್ತರಿಸುವ ಪ್ರಮೇಯವೇ ಇಲ್ಲ. ಈ ಕಾರಣದಿಂದ ಮೇಲ್ಮನವಿದಾರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲಂ 468ರ ಪ್ರಕಾರ, ಘಟಿಸಿದೆ ಎನ್ನಲಾದ ಅಪರಾಧವು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸುವಂತಿದ್ದರೆ ಮತ್ತು ಮೂರು ವರ್ಷಗಳ ಶಿಕ್ಷೆಯನ್ನು ಮೀರದಂತಿದ್ದರೆ, ಆಗ ನ್ಯಾಯಾಲಯವು ಮೂರು ವರ್ಷಗಳ ಒಳಗೆ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು.
ಪ್ರಕರಣ: ಆಂಡೋ ಪೌಲ್ Vs ಜಿ. ಇಸ್ಮಾಯಿಲ್ ಮುಸ್ಲಿಯಾರ್
ಕರ್ನಾಟಕ ಹೈಕೋರ್ಟ್, Crl.R.P. 2/2018 Dated 7-05-2024\