ಪತ್ನಿ ಜೀವಂತ ಇರುವಾಗಲೇ ಲಿವ್ ಇನ್ ರಿಲೇಷನ್: ಮುಸ್ಲಿಮರು ಪ್ರತಿಪಾದಿಸುವಂತಿಲ್ಲ- ಅಲಹಾಬಾದ್ ಹೈಕೋರ್ಟ್
ಪತ್ನಿ ಜೀವಂತ ಇರುವಾಗಲೇ ಲಿವ್ ಇನ್ ರಿಲೇಷನ್: ಮುಸ್ಲಿಮರು ಪ್ರತಿಪಾದಿಸುವಂತಿಲ್ಲ- ಅಲಹಾಬಾದ್ ಹೈಕೋರ್ಟ್
ಮುಸ್ಲಿಂ ಧರ್ಮದ ಅನುಯಾಯಿಯಾಗಿರುವ ವ್ಯಕ್ತಿ ತನ್ನ ಪತ್ನಿ ಜೀವಂತ ಇರುವಾಗಲೇ ಇನ್ನೊಬ್ಬಾಕೆ ಜೊತೆ ಸಹಜೀವನ (ಲಿವ್ ಇನ್ ರಿಲೇಷನ್) ಸಂಬಂಧವನ್ನು ಹಕ್ಕಾಗಿ ಪ್ರತಿಪಾದಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾ. ಅತ್ತಾವು ರೆಹಮಾನ್ ಮಸೂದಿ ಮತ್ತು ನ್ಯಾ. ಅಜಯ್ ಕುಮಾರ್ ಶ್ರೀವಾತ್ಸವ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಇಬ್ಬರು ವ್ಯಕ್ತಿಗಳ ನಡುವೆ ಅಂತಹ ಸಂಬಂಧಗಳ ಮೇಲೆ ರೂಡಿ ಮತ್ತು ಸಂಪ್ರದಾಯಗಳಲ್ಲಿ ನಿಷೇಧ ಇರುವಾಗ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ರಕ್ಷಣೆ ಅನ್ವಯ ಲಿವ್ ಇನ್ ಸಂಬಂಧವನ್ನು ಹಕ್ಕಾಗಿ ಪ್ರತಿಪಾದಿಸುವ ವಾದಕ್ಕೆ ಬೆಂಬಲ ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ.
ವ್ಯಕ್ತಿಯ ವಿರುದ್ಧದ ಅಪಹರಣ ಪ್ರಕರಣವನ್ನು ರದ್ದುಪಡಿಸಿ ಹಿಂದೂ-ಮುಸ್ಲಿಂ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಮುಸ್ಲಿಂ ಅರ್ಜಿದಾರರಿಗೆ ಈಗಾಗಲೇ ಮದುವೆಯಾಗಿದ್ದು, ಐದು ವರ್ಷದ ಮಗಳಿದ್ದಾಳೆ ಎಂಬುದನ್ನು ನ್ಯಾಯಾಲಯ ಗಮನಿಸಿತು. ಅಲ್ಲದೆ, ಅರ್ಜಿದಾರರ ಪತ್ನಿ ಜೀವಂತವಾಗಿದ್ದು, ಉತ್ತರ ಪ್ರದೇಶದಲ್ಲಿ ಇರದೆ ತನ್ನ ಅತ್ತೆ ಮಾವಂದಿರ ಜೊತೆಗೆ ವಾಸವಾಗಿದ್ದಾರೆ. ಅಲ್ಲದೆ, ಈಗಾಗಲೇ ಮದುವೆಯಾಗಿರುವ ಮುಸ್ಲಿಂ ವ್ಯಕ್ತಿಯ ಜೊತೆಗೆ ಹಿಂದೂ ಯುವತಿಯೊಬ್ಬಳು ಲಿವ್ ಇನ್ ಸಂಬಂಧಕ್ಕೆ ಮುಂದಾಗಿದ್ದಳು.
ವ್ಯಕ್ತಿಯ ಪತ್ನಿ ಮತ್ತು ಆತನ ಲಿವ್ ಇನ್ ಸಂಗಾತಿಯನ್ನು ನ್ಯಾಯಾಲಯದ ಸೂಚನೆ ಮೇರೆಗೆ ಹಾಜರುಪಡಿಸಿದಾಗ ಕೆಲವು ಆತಂಕಕಾರಿ ವಿಚಾರಗಳು ನ್ಯಾಯಪೀಠದ ಮುಂದೆ ಬಯಲಾಯಿತು. ತನ್ನ ಪತ್ನಿ ಕೆಲ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ತಾನು ಲಿವ್ ಇನ್ ಸಂಬಂಧ ಹೊಂದುವುದಕ್ಕೆ ಅಭ್ಯಂತರ ಇಲ್ಲ ಎಂದು ಅರ್ಜಿದಾರ ಪ್ರತಿಪಾದಿಸಿದ್ದ. ಪ್ರಸ್ತುತ ಅರ್ಜಿಯಲ್ಲಿ ಆತ ತನ್ನ ಪತ್ನಿಗೆ ತಲಾಖೆ ನೀಡಿದ್ದಾಗಿಯೂ ಹೇಳಿಕೊಂಡಿದ್ದ.
ಒಂದು ವೇಳೆ, ಇಬ್ಬರು ಪ್ರಾಪ್ತ ವಯಸ್ಕರು ಅವಿವಾಹಿತರಾಗಿ ತಮ್ಮ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ನಡೆಸಲು ನಿರ್ಧರಿಸಿದ್ದರೆ ಆಗ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಮುಸ್ಲಿಂ ವ್ಯಕ್ತಿಯ ಪತ್ನಿಯ ಹಕ್ಕು ಮತ್ತು ಅವರಿಬ್ಬರ ಅಪ್ರಾಪ್ತ ವಯಸ್ಕ ಮಗುವಿನ ಹಿತಾಸಕ್ತಿಗಳನ್ನು ಗಮನಿಸಿದಾಗ, ಲಿವ್ ಇನ್ ಸಂಬಂಧ ಮುಂದುವರಿಕೆಗೆ ಅವಕಾಶ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿತು.