ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ವಕೀಲ ಜಡ್ಜ್ ಎಂದು ಹೇಳಿಕೊಂಡ ದೃಶ್ಯ ವೈರಲ್! ವಕೀಲರ ಪರಿಷತ್ತಿನಿಂದ ನೋಟೀಸ್ ಜಾರಿ
ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ವಕೀಲ ಜಡ್ಜ್ ಎಂದು ಹೇಳಿಕೊಂಡ ದೃಶ್ಯ ವೈರಲ್! ವಕೀಲರ ಪರಿಷತ್ತಿನಿಂದ ನೋಟೀಸ್ ಜಾರಿ
ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಸಂದರ್ಭದಲ್ಲಿ ತಾನೊಬ್ಬ ನ್ಯಾಯಾಧೀಶ (ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಸುಳ್ಳು ಹೇಳಿಕೊಂಡಿದ್ದ ವಕೀಲನಿಗೆ ಗ್ರಹಚಾರ ತಗಲಿದೆ.
ಇಂತಹ ಕೃತ್ಯ ನಡೆಸಿದಾತ ವಕೀಲನ ಹೆಸರು ಪ್ರಕಾಶ್ ಸಿಂಗ್. ಈತನ ಈ ಕೃತ್ಯ ಗಮನಕ್ಕೆ ಬರುತ್ತಲೇ ಪಂಜಾಬ್ ಮತ್ತು ಹರ್ಯಾಣ ವಕೀಲರ ಪರಿಷತ್ತು ನೋಟೀಸ್ ಜಾರಿಗೊಳಿಸಿದೆ. ಪರಿಷತ್ತಿನ ಶಿಸ್ತು ಸಮಿತಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಯಾ ವಿವರಣೆ ನೀಡುವಂತೆ ಆರೋಪಿ ವಕೀಲರಿಗೆ ತಾಕೀತು ಮಾಡಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆಯ ದಿನ ನಿಗದಿ ಮಾಡಲಾಗಿದ್ದು, ನಿಗದಿತ ದಿನದಂದು ವಿಚಾರಣೆಗೆ ಹಾಜರಾಗದೇ ಇದ್ದರೆ ಪ್ರತಿವಾದಿಯನ್ನು ಶಿವಾಯಿ ಮಾಡಿ ಪ್ರಕರಣವನ್ನು ಏಕಪಕ್ಷೀಯ ಎಂದು ಪರಿಗಣಿಸಲಾಗುವುದು ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ಮನೀಡಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ಅವರನ್ನು ತಡೆದು ನಿಲ್ಲಿಸಿದಾಗ, ನೀವೇಕೆ ನನ್ನನ್ನು ತಡೆದು ನಿಲ್ಲಿಸಿದಿರಿ. ನಾನು ನಿಮಗೆ ಚಾಲನಾ ಪರವಾನಿಗೆ ತೋರಿಸುವುದಿಲ್ಲ. ಸಬ್ ಇನ್ಸ್‌ಪೆಕ್ಟರ್ ಮಾತ್ರ ನನ್ನ ಲೈಸನ್ಸ್ ಕೇಳಬಹುದು ಎಂದು ಪೊಲೀಸರಿಗೆ ಎದುರುತ್ತರ ನೀಡಿದ್ದಾರೆ.
ಅಲ್ಲದೆ, ನಾನೊಬ್ಬ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ವಕೀಲರ ಪರಿಷತ್ತು ಆರೋಪಿ ವಕೀಲರಿಗೆ ನೋಟೀಸ್ ಜಾರಿಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 170, 186 ಮತ್ತು 419ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಿಂಗ್ ಅವರನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.