ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ; ಸಿವಿಲ್ ಪ್ರಕರಣಕ್ಕೆ ಕ್ರಿಮಿನಲ್ ಬಣ್ಣ ಬಳಿದರೆ ಎಚ್ಚರಿಕೆ- ಕರ್ನಾಟಕ ಹೈಕೋರ್ಟ್ ಖಡಕ್ ವಾರ್ನಿಂಗ್
ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ; ಸಿವಿಲ್ ಪ್ರಕರಣಕ್ಕೆ ಕ್ರಿಮಿನಲ್ ಬಣ್ಣ ಬಳಿದರೆ ಎಚ್ಚರಿಕೆ- ಕರ್ನಾಟಕ ಹೈಕೋರ್ಟ್ ಖಡಕ್ ವಾರ್ನಿಂಗ್
ಪೊಲೀಸ್ ಠಾಣೆಗಳು ವ್ಯಾಪಾರಿ ಕೇಂದ್ರವಲ್ಲ. ಪೊಲೀಸ್ ಠಾಣೆಗಳಿಗೆ ಬರುವ ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ಬಣ್ಣ ಬಳಿದು ದುಡ್ಡು ವಸೂಲಿ, ಹಣಕಾಸಿನ ವ್ಯಾಪಾರಕ್ಕೆ ನಿಂತರೆ ಪೊಲೀಸರಿಗೆ ಕಠಿಣವಾದ ಪಾಠ ಕಲಿಸಬೇಕಾದೀತು ಎಂದು ಕರ್ನಾಟಕ ಹೈಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರ ಮೂಲಕ ರಾಜ್ಯದ ಪೊಲೀಸರಿಗೆ ಈ ಎಚ್ಚರಿಕೆ ನೀಡಿದೆ.
ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಮಾರ್ಪಡಿಸಲು ಹೇಗೆ ಸಾಧ್ಯ? ಪೊಲೀಸ್ ಠಾಣೆಯಲ್ಲಿ ಸಿವಿಲ್ ವ್ಯಾಜ್ಯವನ್ನು ತೀರ್ಮಾನಿಸಲು ಪೊಲೀಸರಿಗೆ ಅಧಿಕಾರವನ್ನು ನೀಡಿದವರು ಯಾರು ಎಂದು ನ್ಯಾಯಪೀಠ ಪ್ರಶ್ನಿಸಿದೆ.
ನಿವೇಶನವೊಂದರ ಖರೀದಿಗೆ ಸಂಬಂಧಿಸಿದ ವಿಚಾರದಲ್ಲಿ ಮಾರಾಟದಾರರಿಗೆ ಹಣ ಪಾವತಿಸಲು ಖರೀದಿದಾರರಿಗೆ ಒತ್ತಾಯಿಸಿದ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಪೊಲೀಸರ ನಡವಳಿಕೆ ಬಗ್ಗೆ ಕಟುವಾಗಿ ಮಾತನಾಡಿತು.
ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯ ಇತ್ಯರ್ಥಪಡಿಸುವ ಪೊಲೀಸರ ಕಾರ್ಯವೈಖರಿ ಮತ್ತೆ ಮತ್ತೆ ನಡೆಯುತ್ತಿದೆ. ಠಾಣೆಗಳನ್ನು ವ್ಯಾಪಾರೀ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪೊಲೀಸರು ಸಿವಿಲ್ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂಬುದಾಗಿ ಹೈಕೋರ್ಟ್‌ನ ಸಾಕಷ್ಟು ಪೀಠಗಳು ಹಲವು ಬಾರಿ ಆದೇಶ ನೀಡಿವೆ. ಆದರೂ, ಪೊಲೀಸರು ಮಾತ್ರ ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುತ್ತಲೇ ಬಂದಿದ್ದಾರೆ. ಇದು ಒಪ್ಪುವಂತಹುದಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ದೂರುದಾರನ ಜೊತೆಗೆ ಕೈಜೋಡಿಸಿ ಕಳ್ಳಾಟ ಆಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಅಧಿಕಾರಿ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಒಂದು ತಿಂಗಳಲ್ಲಿ ವರದಿ ನೀಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ತನಿಖಾಧಿಕಾರಿ ಕಾನೂನು ದುರ್ಬಳಕೆ ಮಾಡಿರುವ ಬಗ್ಗೆ ಅರ್ಜಿದಾರರು ತನ್ನ ಬಳಿ ಇರುವ ಎಲ್ಲ ದಾಖಲೆಗಳನ್ನು ಡಿಸಿಪಿಗೆ ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.