DySP ಶ್ರೇಣಿ ಅಧಿಕಾರಿಗಳಿಗೆ ಪಂಚನಾಮೆಯ ನಾಲ್ಕಕ್ಷರ ಬರೆಯಲು ಬರಲ್ಲ: ನ್ಯಾ. ಶ್ರೀಶಾನಂದ ವಿಷಾದ
DySP ಶ್ರೇಣಿ ಅಧಿಕಾರಿಗಳಿಗೆ ಪಂಚನಾಮೆಯ ನಾಲ್ಕಕ್ಷರ ಬರೆಯಲು ಬರಲ್ಲ: ನ್ಯಾ. ಶ್ರೀಶಾನಂದ ವಿಷಾದ
ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸ್ ತನಿಖಾ ವರದಿಯ ಲೋಪಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ನ್ಯಾ. ವಿ. ಶ್ರೀಶಾನಂದ ಗಂಭೀರವಾದ ವಿಚಾರಗಳನ್ನು ಎತ್ತಿದ್ದು, ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನ್ಯೂನ್ಯತೆಗಳ ಬಗ್ಗೆ ಕಟು ಶಬ್ಧಗಳಲ್ಲಿ ಟೀಕಿಸಿದ್ದಾರೆ.
ಅಪರಾಧಿಕ ಪ್ರಕರಣಗಳಲ್ಲಿ ಪೊಲೀಸರು ತನಿಖೆ ವೇಳೆ ಲೋಪಗಳನ್ನು ಎಸಗುತ್ತಾರೆ. ಪೊಲೀಸರು ಸಮರ್ಪಕವಾದ ತನಿಖೆ ನಡೆಸುವುದಿಲ್ಲ. ತನಿಖೆಯಲ್ಲಿ ಅವರು ಪಾಲಿಸಬೇಕಾದ ನಿಯಮಗಳನ್ನು ಕಡೆಗಣಿಸುತ್ತಾರೆ. ಇದಕ್ಕೆ ಹಿರಿಯ ಅಧಿಕಾರಿಗಳ ಮೇಲಿರುವ ಹೆಚ್ಚಿನ ಒತ್ತಡ, ಕರ್ತವ್ಯವೂ ಕಾರಣ ಎಂದು ಶ್ರೀಶಾನಂದ ಬೇಸರ ವ್ಯಕ್ತಪಡಿಸಿದ್ದಾರೆ
ಬಹುತೇಕ ಡಿವೈಎಸ್‌ಪಿ ಶ್ರೇಣಿ ಅಧಿಕಾರಿಗಳಿಗೆ ಪಂಚನಾಮೆಯ ನಾಲ್ಕಕ್ಷರ ಬರೆಯಲು ಬರುವುದಿಲ್ಲ. ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಅವರು ಯಾವತ್ತೂ ಮರಣೋತ್ತರ ಪರೀಕ್ಷೆ ನಡೆಯುವಾಗ ಖುದ್ದು ಹಾಜರು ಇರುವುದಿಲ್ಲ. ಒಂದು ವೇಳೆ, ಅಪರೂಪಕ್ಕೊಮ್ಮೆ ಬಂದರೂ ವೈದ್ಯರತ್ತ ಮಾತನಾಡುತ್ತಾ ಕೂರುತ್ತಾರೆ ಎಂದು ನ್ಯಾ. ಶ್ರೀಶಾನಂದ ಹೇಳಿದರು.
ನಗರಕ್ಕೆ ವಾರಕ್ಕೆ ಮೂರ್ನಾಲ್ಕು ದಿನ ಒಂದಲ್ಲ ಒಂದು ವಿಐಪಿಗಳು ಬಂದೇ ಬರುತ್ತಾರೆ. ಅವರು ಸುಗಮ ಸಂಚಾರ ವ್ಯವಸ್ಥೆ, ಬಂದೋಬಸ್ತ್ ಹೊಣೆ ಹಿರಿಯ ಅಧಿಕಾರಿಗಳ ಮೇಲೆ ಇರುತ್ತದೆ. ಬೆಳಿಗ್ಗೆ ಎದ್ದರೆ ಬಂದೋಬಸ್ತ್ ಶುರುವಾಗುತ್ತದೆ, ಇನ್ನು ತನಿಖೆ ಎಲ್ಲಿ ಸಮರ್ಪಕವಾಗಿ ನಡೆಯುತ್ತದೆ ಎಂದು ಅವರು ವಿಷಾದಿಸಿದ್ದಾರೆ.
ಇನ್ಸ್‌ಪೆಕ್ಟರ್ ಹಾಗೂ ಎಸ್‌ಐ ಬಂದೋಬಸ್ತ್ ಕರ್ತವ್ಯದಲ್ಲಿ ಇದ್ದರೆ ಮುಖ್ಯ ಪೇದೆ ತನಿಖೆ ನಡೆಸಿ ವರದಿ ರೆಡಿ ಮಾಡುತ್ತಾರೆ. ಈ ವರದಿಗೆ ಇನ್ಸ್‌ಪೆಕ್ಟರ್ ಅಥವಾ ಎಸ್‌ಐ ಶ್ರೇಣಿಯ ಅಧಿಕಾರಿಗಳು ಸಹಿ ಮಾಡಿ ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಮುಖ್ಯ ಪೇದೆಗೆ ಕಾನೂನಿನ ಬಗ್ಗೆ ಏನು ಮಾಹಿತಿ ಗೊತ್ತಿರುತ್ತದೆ. ಅವರದಲ್ಲಿ ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಎಷ್ಟು ಮಾಹಿತಿ ಇರುತ್ತದೆ..? ನೀವೇ ಊಹಿಸಿ ಕಾನೂನು ತಿಳಿಯದಿರುವವರು ಹೇಗೆ ಪರಿಣಾಮಕಾರಿ ತನಿಖೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಮಾರ್ಮಿಕವಾಗಿ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ಹೇಳಿದರು.
ಮಹಜರು ಯಾ ಪಂಚನಾಮೆ ವರದಿ ಅಪರಾಧಿಕ ಘಟನೆಯ ಸ್ಪಷ್ಟ ಹಾಗೂ ಸಂಕ್ಷಿಪ್ತ ಚಿತ್ರಣ ನೀಡುತ್ತದೆ. ಆರೋಪಿಗೆ ಘಟನಾ ಸ್ಥಳಕ್ಕೆ ಹೇಗೆ ಬಂದ, ಮರಳಿ ಹೇಗೆ ಹೋದ... ಹೇಗೆ ಕೃತ್ಯ ಎಸಗಿದ ಎಂಬುದನ್ನು ವಿವರಿಸುತ್ತದೆ. ಆರೋಪಿಯನ್ನು ಯಾರಾದರೂ ನೋಡಿರುವ ಸಾಧ್ಯತೆ ಇದೆಯೇ..? ಘಟನಾ ಸ್ಥಳದ ಸುತ್ತ ಏನೇನಿದೆ ಎಂಬುದನ್ನು ಮಹಜರು ವರದಿ ತಿಳಿಸುತ್ತದೆ. ಈ ಎಲ್ಲ ವಿವರಗಳು ತಿಳಿಯದೆ ಹೋದರೆ ಸರಿಯಾದ ದಾರಿಯಲ್ಲಿ ಹೇಗೆ ತಾನೇ ತನಿಖೆ ನಡೆಸಬಹುದು.? ಈ ತಪ್ಪುಗಳನ್ನು ಪೊಲೀಸ್ ತನಿಖಾಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿ ಸೂಕ್ತವಾಗಿ ಮಹಜರು ಮಾಡಬೇಕು. ಮಾಸ್ಕ್ ಧರಿಸಿ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಬೇಕು. ಕ್ರಿಮಿನಲ್ ಕಾನೂನುಗಳ ಬಗ್ಗೆ ಮಾಹಿತಿ ಪಡೆದು ಕಾಲ ಕಾಲಕ್ಕೆ ಅಪ್‌ಡೇಟ್ ಆಗಿರಬೇಕು ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನ್ಯಾಯಮೂರ್ತಿಗಳು, ಸರ್ಕಾರಿ ವಕೀಲರು, ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮ ನಡೆಸಬೇಕು ಹಾಗೂ ಪೊಲೀಸರಿಗೆ ಕಾನೂನುಗಳು ಮತ್ತು ಕೋರ್ಟ್ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನ್ಯಾ. ಶ್ರೀಶಾನಂದ ಅಪೇಕ್ಷೆ ವ್ಯಕ್ತಪಡಿಸಿದರು.