ಮೀಸಲಾತಿ ಮೂಲಭೂತ ಹಕ್ಕಲ್ಲ; ರಾಜ್ಯಗಳಿಗೆ ನಿರ್ದೇಶನ ನೀಡುವಂತಿಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಸಮಗ್ರಾವಲೋಕ
ಮೀಸಲಾತಿ ಮೂಲಭೂತ ಹಕ್ಕಲ್ಲ, ಮೀಸಲಾತಿ ನೀಡುವಂತೆ ರಾಜ್ಯಗಳಿಗೆ ನಿರ್ದೇಶಿಸುವಂತಿಲ್ಲ- ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮೀಸಲಾತಿಯ ಸಮಗ್ರ ಅವಲೋಕನ
ಭಾರತೀಯ ಸಮಾಜವನ್ನು ಪ್ರಜಾಸತಾತ್ಮಕ ಮತ್ತು ಸಮಾನತೆಯ ಸಮಾಜವನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ಸಂವಿಧಾನದ ರಚನಾಕಾರರು ನಿಮ್ನ ವರ್ಗವನ್ನು ಮುಖ್ಯ ವಾಹಿನಿಯಲ್ಲಿ ಸೇರಿಸಲು ಮೀಸಲಾತಿಯ ನೀತಿಯನ್ನು ಪ್ರಸ್ತಾಪಿಸಿದರು. ರಾಜ್ಯವು ಒದಗಿಸುವ ಸೇವೆಗಳಲ್ಲಿ ನಾಗರೀಕ ವರ್ಗವನ್ನು ಸರಿಯಾಗಿ ಪ್ರತಿನಿಧಿಸದಿದ್ದಾಗ ರಾಜ್ಯದ ದೃಷ್ಟಿಕೋನದಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಉನ್ನತೀಕರಿಸಲು ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತದೆ. ಭಾರತದಲ್ಲಿ ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗದವರಿಗೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಶೋಷಣೆಗೆ ಒಳಗಾಗಿರುವ ಕಾರಣಕ್ಕಾಗಿ ಮೀಸಲಾತಿ ನೀಡಲಾಗುತ್ತದೆ.
ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ 2020ರ ಮೊದಲಾರ್ಧದಲ್ಲಿ ಎರಡು ಪ್ರಕರಣಗಳಲ್ಲಿ ನೀಡಿದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಈ ತೀರ್ಪು ಹಿಂದುಳಿದ ಸಮುದಾಯಗಳಲ್ಲಿ ಅಶಾಂತಿಯನ್ನು ಹುಟ್ಟು ಹಾಕಿದೆ. ಮೊದಲ ಸಂದರ್ಭವೆಂದರೆ “ಮುಕೇಶ್ ಕುಮಾರ್ ವಿರುದ್ಧ ಉತ್ತರಾಖಂಡ ರಾಜ್ಯ” ಪ್ರಕರಣವು ಭಡ್ತಿಯಲ್ಲಿ ಮೀಸಲಾತಿಯ ಪ್ರಶ್ನೆಯನ್ನು ಒಳಗೊಂಡಿತ್ತು. ದಿನಾಂಕ 7-11-2020 ರಂದು ಸುಪ್ರೀಂ ಕೋರ್ಟ್ ಭಡ್ತಿಯಲ್ಲಿ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಸಂವಿಧಾನದ ಅಡಿ ಅವಕಾಶವಿಲ್ಲ ಎಂಬುದಾಗಿ ತೀರ್ಪು ನೀಡಿದೆ.
ಇನ್ನೊಂದು ಪ್ರಕರಣವು ವೈದ್ಯಕೀಯ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟುಗಳ ಮೀಸಲಾತಿಗೆ ಸಂಬಂಧಿಸಿದೆ. ತಮಿಳುನಾಡು ರಾಜ್ಯದ ಸಿಪಿಐ, ಡಿಎಂಕೆ, ತಮಿಳುನಾಡು ಕಾಂಗ್ರೆಸ್ ಸಮಿತಿ, ಸಿಪಿಐ(ಎಂ) ಮುಂತಾದ ರಾಜಕೀಯ ಪಕ್ಷಗಳು ಭಾರತ ಸರಕಾರದ ವಿರುದ್ಧ ಸಂವಿಧಾನದ ವಿಧಿ 32ರ ಅಡಿ ದಾಖಲಿಸಿದ ಪ್ರಕರಣದಲ್ಲಿ ದಿನಾಂಕ 11.6.2020 ರಂದು ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ. ಸಮಾನತೆ ಹಾಗೂ ಸಾಮಾಜಿಕ ನ್ಯಾಯ ನೀಡಲು ಸರಕಾರಗಳು ರೂಪಿಸಿದ ನೀತಿಯಾಗಿದೆ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.
ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಗಾಗಿ ಸಾಂವಿಧಾನಿಕ ನಿಬಂಧನೆಗಳು
ಜಾತಿ ಆಧಾರಿತ ಮೀಸಲಾತಿ ಸಂವಿಧಾನದ ವಿಧಿ 29 (2)ನ್ನು ಉಲ್ಲಂಘಿಸುತ್ತದೆ ಎಂಬುದಾಗಿ “ಮದ್ರಾಸ್ ರಾಜ್ಯ ವಿರುದ್ಧ ಚಂಪಕಂ ದೊರೆರಾಜನ್” ಪ್ರಕರಣದಲ್ಲಿ 1952 ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಭಾರತದ ಸಂವಿಧಾನದ ವಿಧಿ 15 ಕ್ಕೆ ಉಪವಿಧಿ(4) ಸೇರ್ಪಡಿಸಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತರಲು ಕಾರಣವಾಯಿತು. ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅನುಕೂಲಕರ ನಿಬಂಧನೆಗಳ ಮೂಲಕ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಪಂಗಡಗಳ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಕ್ಕೆ ನೀಡಲಾಯಿತು.
“ಟಿ. ದೇವದಾಸನ್ ವಿರುದ್ಧ ಭಾರತ ಸರಕಾರ” ಈ ಪ್ರಕರಣದಲ್ಲಿ ನೇಮಕಾತಿಗೆ ಒಂದು ವೇಳೆ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ಲಭ್ಯರಾಗದೇ ಇದ್ದಲ್ಲಿ ಸದರಿ ಹುದ್ದೆಗಳನ್ನು ಕಾಯ್ದಿರಿಸಲಾಗಿಲ್ಲ ಎಂದು ಪರಿಗಣಿಸಬೇಕು ಎಂಬುದಾಗಿ 1964 ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತು.
“ಇಂದಿರಾ ಸಹಾನಿ ವಿರುದ್ಧ ಭಾರತ ಸರಕಾರ” ಈ ಪ್ರಕರಣದಲ್ಲಿ ದಿನಾಂಕ 16.11.1992 ರಲ್ಲಿ ಸಂವಿಧಾನದ ವಿಧಿ 16 (4) ನೇಮಕಾತಿಗೆ ಮಾತ್ರ ಅನ್ವಯಿಸುತ್ತದೆ. ಭಡ್ತಿಗೆ ಅನ್ವಯಿಸುವುದಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿತು. ಹಿಂದುಳಿದ ವರ್ಗಗಳನ್ನು ಗುರುತಿಸುವಾಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದವರನ್ನು ಹೊರಗಿಡಬೇಕು ಎಂಬ “ಕೆನೆ ಪದರ”(ಕ್ರೀಮೀ
ಲೇಯರ್) ಪರಿಕಲ್ಪನೆಯನ್ನು ಪರಿಚಯಿಸಿತು. ಒಟ್ಟು ಮೀಸಲಾತಿಯ ಪ್ರಮಾಣ ಶೇಕಡ 50 ಮೀರಬಾರದು ಎಂದು ನಿರ್ದೇಶಿಸಿತು. ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ ತೀರ್ಪನ್ನು ನಿಷ್ಫಲಗೊಳಿಸಲು ಸಂಸತ್ 1995ರಲ್ಲಿ 77ನೇ ತಿದ್ದುಪಡಿ ಮೂಲಕ ವಿಧಿ 16 (4)(ಎ) ಸೇರ್ಪಡಿಸಿ ಭಡ್ತಿಯಲ್ಲಿ ಮೀಸಲಾತಿಯನ್ನು ಒದಗಿಸಲು ಅವಕಾಶ ಮಾಡಿಕೊಟ್ಟಿತು.
“ಅಜಿತ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ” ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1996ರಲ್ಲಿ ನೀಡಿದ ತೀರ್ಪು “ಕ್ಯಾಚ್ ಅಪ್ ನಿಯಮದ” ಪರಿಕಲ್ಪನೆಯನ್ನು ಪರಿಚಯಿಸಿತು. ಪ.ಜಾ.,ಪ.ಪಂ. ಅಭ್ಯರ್ಥಿಗಳ ನಂತರ ಭಡ್ತಿ ಪಡೆದ ಹಿರಿಯ ಸಾಮಾನ್ಯ ಅಭ್ಯರ್ಥಿಗಳು ಈ ಹಿಂದೆ ಭಡ್ತಿ ಪಡೆದ ಸಾಮಾನ್ಯ ಅಭ್ಯರ್ಥಿಗಳಿಗಿಂತ ತಮ್ಮ ಸೇವಾ ಜ್ಯೇಷ್ಠತೆಯನ್ನು ಮರಳಿ ಪಡೆಯುತ್ತಾರೆ ಎಂಬ ನಿಯಮ ಜಾರಿಗೆ ಬಂತು. ಸಂವಿಧಾನದ 81ನೆ ತಿದ್ದುಪಡಿ ಮೂಲಕ ವಿಧಿ 16 (4)(ಬಿ) ಸೇರ್ಪಡಿಸಿ ಹಿಂದಿನ ವರ್ಷಗಳಿಂದ ಭರ್ತಿಯಾಗದ ಖಾಲಿ ಹುದ್ದೆಗಳನ್ನು ಮುಂದಕ್ಕೊಯಲು ಅವಕಾಶ ಮಾಡಿಕೊಡುವ “ಕ್ಯಾರಿ ಫಾರ್ವರ್ಡ್” ನಿಯಮವನ್ನು ಜಾರಿಗೆ ತರಲಾಯಿತು.
ಸಂವಿಧಾನದ ವಿಧಿ 335 ರ ಪ್ರಕಾರ ಸೇವೆಗಳು ಮತ್ತು ಹುದ್ದೆಗಳಿಗೆ ಎಸ್ಸಿ ಎಸ್ಟಿ ಹಕ್ಕುಗಳು ಒಟ್ಟಾರೆ ಆಡಳಿತಾತ್ಮಕ ದಕ್ಷತೆಗೆ ಅನುಗುಣವಾಗಿರಬೇಕು. ಸಂವಿಧಾನದ ವಿಧಿ 335 ಕ್ಕೆ ನಿಬಂಧನೆಯನ್ನು ಸೇರಿಸಿ 82ನೇ ತಿದ್ದುಪಡಿಯನ್ನು ಮಾಡಲಾಯಿತು. ಎಸ್ಸಿ ಎಸ್ಟಿ ಅವರಿಗೆ ಭಡ್ತಿಯ ವಿಷಯಗಳಲ್ಲಿ ಮೀಸಲಾತಿಗಾಗಿ ಅರ್ಹತಾ ಅಂಕಗಳನ್ನು ಸಡಿಲಿಸುವುದರಿಂದ ಅಥವಾ ಮೌಲ್ಯಮಾಪನದ ಗುಣಮಟ್ಟವನ್ನು ಕಡಿಮೆ ಮಾಡುವುದರಿಂದ ವಿಧಿ 335 ರಡಿ ಯಾವುದೇ ರಾಜ್ಯವನ್ನು ತಡೆಯುವಂತಿಲ್ಲ ಎಂಬ ನಿಬಂಧನೆಯನ್ನು ಪರಿಚಯಿಸಿತು.
“ಟಿಎಂಎ ಪೈ ಫೌಂಡೇಶನ್ ವಿರುದ್ಧ ಕರ್ನಾಟಕ ಸರಕಾರ” ಈ ಪ್ರಕರಣದಲ್ಲಿ ರಾಜ್ಯವು ಖಾಸಗಿ ಶಿಕ್ಷಣ
ಸಂಸ್ಥೆಗಳಿಗೆ ಮೀಸಲಾತಿಯನ್ನು ಅನ್ವಯಿಸುವಂತಿಲ್ಲ ಎಂಬುದಾಗಿ ದಿನಾಂಕ 31.10.2002 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು.
“ನಾಗರಾಜ್ ವಿರುದ್ಧ ಭಾರತ ಸರಕಾರ” ಈ ಪ್ರಕರಣದಲ್ಲಿ ಅರ್ಜಿದಾರರು ವಿಧಿ 77, 81, 82 ಮತ್ತು 85ನೇ ತಿದ್ದುಪಡಿಗಳನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. ಅಂತಿಮವಾಗಿ ನ್ಯಾಯಾಲಯ ತಿದ್ದುಪಡಿಗಳನ್ನು ಸಾಂವಿಧಾನಿಕವಾಗಿ ಮಾನ್ಯವೆಂದು ಎತ್ತಿ ಹಿಡಿದಿದೆ. ಐವರು ನ್ಯಾಯಾಧೀಶರ ಪೀಠವು ಎಸ್ಸಿ ಎಸ್ಟಿ ಯವರಿಗೆ ಭಡ್ತಿಯಲ್ಲಿ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ.
ಇದು ಅನುಚ್ಛೇದ 16(4)(ಎ) ಅಡಿಯಲ್ಲಿ ತತ್ಪರಿಣಾಮ ಹಿರಿತನದ ನಿಯಮವನ್ನು ಅನುಚ್ಛೇದ 16(4)(ಬಿ) ಅಡಿಯಲ್ಲಿ ಕ್ಯಾರಿ ಫಾರ್ವರ್ಡ್ ನಿಯಮವನ್ನು ಹಾಗೂ ವಿಧಿ 335ರ ನಿಯಮವನ್ನು ಎತ್ತಿ ಹಿಡಿದಿದೆ. ಭಡ್ತಿಯಲ್ಲಿ ಮೀಸಲಾತಿ ಮಾನ್ಯವಾಗಬೇಕಾದರೆ ರಾಜ್ಯ ಮೂರು ಬಲವಾದ ಅವಶ್ಯಕತೆಗಳನ್ನು ಪೂರೈಸಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
1) ಎಸ್ಸಿ ಎಸ್ಟಿ ಯ ಹಿಂದುಳಿದಿರುವಿಕೆಯ ಬಗ್ಗೆ ದತ್ತಾಂಶವನ್ನು ಪಡೆಯುವುದು.
2) ಸಂಬಂಧಿತ ಸಾರ್ವಜನಿಕ ಉದ್ಯೋಗದಲ್ಲಿ ಎಸ್.ಸಿ, ಎಸ್. ಟಿ. ಅವರನ್ನು ಅಸಮರ್ಪಕವಾಗಿ ಪ್ರತಿನಿಧಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವುದು.
3) ಆಡಳಿತದ ಒಟ್ಟಾರೆ ದಕ್ಷತೆಯನ್ನು ಕಾಪಾಡಿಕೊಳ್ಳುವುದು.
ಈ ಮೂರು ನಿಯಂತ್ರಣ ಶರತ್ತುಗಳನ್ನು ಪರಿಚಯಿಸಿದ ನಂತರ ವಿವಿಧ ಹೈಕೋರ್ಟ್ ಗಳು ಮತ್ತು ಸುಪ್ರೀಂಕೋರ್ಟುಗಳು ಮೀಸಲಾತಿಯನ್ನು ವಿಸ್ತರಿಸುವ ಕಾನೂನುಗಳು ಮತ್ತು ನಿಯಮಗಳನ್ನು ರದ್ದುಗೊಳಿಸಿದವು. ನಿಯಂತ್ರಣದ ಶರತ್ತುಗಳನ್ನು ಪೂರೈಸಲು ಸಾಕಷ್ಟು ದತ್ತಾಂಶವನ್ನು ಒದಗಿಸುವಲ್ಲಿ ರಾಜ್ಯವು ವಿಫಲವಾಗಿದೆ ಎಂದು ವಿವಿಧ ನ್ಯಾಯಾಲಯಗಳು ತೀರ್ಪು ನೀಡಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಹಿಂದುಳಿದಿರುವಿಕೆ ಮತ್ತು ಸಾಕಷ್ಟು ಪ್ರತಿನಿಧಿ ಪ್ರಾತಿನಿಧ್ಯವನ್ನು ಪ್ರದರ್ಶಿಸಲು ವಿಫಲವಾಗಿದೆ ಎಂದು ನ್ಯಾಯಾಲಯಗಳು ರಾಜ್ಯವನ್ನು ಟೀಕಿಸಿವೆ.
“ಜರ್ನೈಲ್ ಸಿಂಗ್ ವಿರುದ್ಧ ಲಕ್ಷ್ಮೀ ನರೇನ್ ಗುಪ್ತ” ಈ ಪ್ರಕರಣದಲ್ಲಿ ಎಸ್ಸಿ ಎಸ್ಟಿ ವ್ಯಕ್ತಿಗಳಿಗೆ ಭಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ 2006ರಲ್ಲಿ ನಾಗರಾಜ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು 7 ನ್ಯಾಯಾಧೀಶರನ್ನು ಒಳಗೊಂಡ ದೊಡ್ಡ ಪೀಠವು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರ ಪೀಠವು ಸರ್ವಾನುಮತದಿಂದ ಹೇಳಿದೆ. ಕೆನೆ ಪದರದ ಹೊರಗಿಡುವಿಕೆಯು ಎಸ್ಸಿ ಎಸ್ಟಿ ವ್ಯಕ್ತಿಗಳಿಗೂ ವಿಸ್ತರಿಸುತ್ತದೆ ಮತ್ತು ರಾಜ್ಯವು ಅವರ ಸಮುದಾಯದ ಕೆನೆಪದರಕ್ಕೆ ಸೇರಿದ ವ್ಯಕ್ತಿಗಳಿಗೆ ಭಡ್ತಿಯಲ್ಲಿ ಮೀಸಲಾತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಬಿ.ಕೆ. ಪವಿತ್ರ ವಿರುದ್ಧ ಭಾರತ ಸರಕಾರ II
2019 ರಲ್ಲಿ ಸುಪ್ರೀಂ ಕೋರ್ಟ್ ಭಡ್ತಿ ನೀತಿಯಲ್ಲಿ ಮೀಸಲಾತಿಯನ್ನು ಎತ್ತಿ ಹಿಡಿದಿದೆ. ಎಸ್ಸಿ ಎಸ್ಟಿ ವ್ಯಕ್ತಿಗಳು ಸಮರ್ಪಕವಾಗಿ ಪ್ರತಿನಿಧಿಸುತ್ತಿದ್ದಾರೆ ಮತ್ತು ನೀತಿಯು ದಕ್ಷತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸಾಬೀತುಪಡಿಸಲು ರಾಜ್ಯವು ಸಾಕಷ್ಟು ದತ್ತಾಂಶವನ್ನು ಒದಗಿಸಿದೆ ಎಂಬ ಆಧಾರದ ಮೇಲೆ 2018ರ ಕರ್ನಾಟಕ ಮೀಸಲಾತಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. 2018ರ ಕಾಯಿದೆಯು ರಾಜ್ಯ ಸರಕಾರಿ ಸೇವೆಗಳಲ್ಲಿ ಎಸ್ಸಿ ಎಸ್ಟಿ ವ್ಯಕ್ತಿಗಳಿಗೆ ಸೇವಾ ಜ್ಯೇಷ್ಠತೆಯನ್ನು ಪರಿಚಯಿಸುತ್ತದೆ.
ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಸಂವಿಧಾನದ 335 ನೇ ವಿಧಿಯ ಅಡಿಯಲ್ಲಿ ಆಡಳಿತಾತ್ಮಕ ದಕ್ಷತೆಯ ಹೊಸ ಅಂತರ್ಗತ ವ್ಯಾಖ್ಯಾನವನ್ನು ಪರಿಚಯಿಸಿತು. ಹೊಸ ವ್ಯಾಖ್ಯಾನವನ್ನು ಸಾಕಷ್ಟು ಪ್ರಾತಿನಿಧ್ಯವನ್ನು ಖಾತರಿ ಪಡಿಸುವುದರೊಂದಿಗೆ ಅರ್ಹತೆಯನ್ನು ಸಮತೋಲನಗೊಳಿಸುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಜರ್ನೈಲ್ ಸಿಂಗ್ ಪ್ರಕರಣದಲ್ಲಿ ಪರಿಚಯಿಸಲಾದ ಕೆನೆ ಪದರ ಪರೀಕ್ಷೆಯನ್ನು ಅನ್ವಯಿಸಲು ರಾಜ್ಯವು ವಿಫಲವಾಗಿದೆ ಎಂಬ ಅಂಶದ ಹೊರತಾಗಿಯೂ ನ್ಯಾಯಾಲಯವು ಕಾಯ್ದೆಯನ್ನು ಎತ್ತಿ ಹಿಡಿದಿದೆ.
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಮೀಸಲಾತಿ
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಹತ್ತು ಶೇಕಡ ಮೀಸಲಾತಿ ನೀಡುವುದು ಸಂವಿಧಾನ ಬದ್ಧ ಎಂದು ಸುಪ್ರೀಂಕೋರ್ಟ್ ದಿನಾಂಕ 7-11 2022 ರಂದು ಜನಹಿತ್ ಅಭಿಯಾನ್ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಕೇಂದ್ರ ಸರಕಾರವು ತಂದ ಸಂವಿಧಾನದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದೆ.
ಸದರಿ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಹಿಂದುಳಿದ ಸಮುದಾಯಗಳ ಹಕ್ಕುಗಳ ಸೊಸೈಟಿ ವಿರುದ್ಧ ಜನಹಿತ್ ಅಭಿಯಾನ್ ಸಹಿತ ಇತರರು ಸಲ್ಲಿಸಲಾದ 30ಕ್ಕೂ ಅಧಿಕ ಅರ್ಜಿಗಳನ್ನು ಆಲಿಸಿದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಶ್ರೀ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ದಿನಾಂಕ 7-11-2012 ರ ತೀರ್ಪನ್ನು ಮರು ಪರಿಶೀಲಿಸಲು ಯಾವುದೇ ಆಧಾರಗಳಿಲ್ಲ ಎಂಬ ಅಭಿಪ್ರಾಯದೊಂದಿಗೆ ದಿನಾಂಕ 9.5.2023 ರಂದು ಎಲ್ಲಾ ಪುನರಾವಲೋಕನ ಅರ್ಜಿಗಳನ್ನು ವಜಾಗೊಳಿಸಿದೆ.
ಭಡ್ತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕ ರಾಜ್ಯದ ನೌಕರರ ಮೇಲೆ ಪರಿಣಾಮ ಬೀರಲಿದೆಯೇ?
ಬಿ.ಕೆ.ಪವಿತ್ರ ಪ್ರಕರಣದಲ್ಲಿ ಫೆಬ್ರವರಿ 2017ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಏಪ್ರಿಲ್ 1978 ರಿಂದ ಎಸ್ಸಿ ಎಸ್ಟಿ ನೌಕರರಿಗೆ ನೀಡಲಾದ ಭಡ್ತಿಯಲ್ಲಿ ಮೀಸಲಾತಿಯನ್ನು ರದ್ದುಗೊಳಿಸಿದ್ದು ಇದು 3700ಕ್ಕೂ ಹೆಚ್ಚು ಉದ್ಯೋಗಿಗಳ ಹಿಂಬಡ್ತಿ ಸುಮಾರು 5000 ಉದ್ಯೋಗಿಗಳಿಗೆ ಭಡ್ತಿ ಮತ್ತು ಸುಮಾರು 65,000 ಉದ್ಯೋಗಿಗಳ ಹಿರಿತನದಲ್ಲಿ ಬದಲಾವಣೆಗೆ ಕಾರಣವಾಯಿತು. ಇದನ್ನು ತಪ್ಪಿಸಲು ಮೀಸಲಾತಿ (ರಾಜ್ಯದ ನಾಗರಿಕ ಸೇವೆಗಳಲ್ಲಿನ ಹುದ್ದೆಗಳಿಗೆ) ಕಾಯಿದೆ 2017 ಆಧಾರದ ಮೇಲೆ ಭಡ್ತಿ ಪಡೆದ ಸರಕಾರಿ ನೌಕರರಿಗೆ ಕರ್ನಾಟಕ ವಿಸ್ತರಣೆಯ ಹಿರಿತನವನ್ನು ನವಂಬರ್ 2017ರಲ್ಲಿ ಅಂಗೀಕರಿಸಲಾಯಿತು.
2017ರ ಕಾನೂನನ್ನು ಮೇ 2019 ರಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಲಾಭ ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದ್ದು ಉದ್ಯೋಗಗಳಲ್ಲಿ ಎಸ್ಸಿ ಎಸ್ಟಿ ವ್ಯಕ್ತಿಗಳ ಸಮರ್ಪಕತೆ ಅಥವಾ ಅಸಮರ್ಪಕತೆಯ ಬಗ್ಗೆ ರಾಜ್ಯದ ದೃಷ್ಟಿಕೋನವನ್ನು ಪ್ರಶ್ನಿಸಲಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಸುಪ್ರೀಂ ಕೋರ್ಟ್ ನ ಮತ್ತೊಂದು ಪೀಠವು 2019ರ ಆದೇಶವನ್ನು ಕಾನೂನಿನಡಿ ಸರಿಯಲ್ಲ ಎಂದು ಹೇಳಿದೆ. ಏಕೆಂದರೆ 2016ರ ಎಂ. ನಾಗರಾಜ್ ಪ್ರಕರಣದ ತೀರ್ಪಿನಲ್ಲಿ ನಿಗದಿಪಡಿಸಿದ ತತ್ವಗಳನ್ನು ಉಲ್ಲಂಘಿಸಲಾಗಿದೆ.
ಇದೀಗ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪಿನಿಂದ ಕರ್ನಾಟಕಕ್ಕೆ ಏನೂ ತೊಂದರೆ ಇಲ್ಲ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ಸವಿಸ್ತಾರ ವಿಚಾರ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಮಾಹಿತಿ ಸಂಗ್ರಹಿಸಿ ಬಡ್ತಿ ಮೀಸಲಾತಿ ನೀಡುವುದಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಮ್ಮ ರಾಜ್ಯದಲ್ಲಿ ಸಮಸ್ಯೆ ಆಗದು. ಆದರೆ ಹಲವು ರಾಜ್ಯಗಳಲ್ಲಿ ಮೀಸಲಾತಿಗೆ ಅಪಾಯ ಬರುವ ಸಾಧ್ಯತೆ ಇದೆ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು,
ಮಂಗಳೂರು ನ್ಯಾಯಾಲಯ ಸಂಕೀರ್ಣ