ಸರ್ಕಾರದ ಕೋಟಾ ಲಾಭ ಪಡೆದರೆ, MBBS ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಕಡ್ಡಾಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರದ ಕೋಟಾ ಲಾಭ ಪಡೆದರೆ, MBBS ವಿದ್ಯಾರ್ಥಿಗಳ ಗ್ರಾಮೀಣ ಸೇವೆ ಕಡ್ಡಾಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸರ್ಕಾರಿ ಕೋಟಾದಲ್ಲಿ ಫಲಾನುಭವಿಯಾಗಿ ವೈದ್ಯಕೀಯ ಶಿಕ್ಷಣ ಪಡೆದು MBBS ಪದವಿ ಪಡೆದರೆ, ಪದವಿ ಪಡೆದ ಬಳಿಕ ಕಡ್ಡಾಯವಾಗಿ ಗ್ರಾಮೀಣ ವೈದ್ಯಕೀಯ ಸೇವೆ ಪಡೆಯುವ ಮಾಡಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸರ್ಕಾರಿ ಕೋಟಾ ಪಡೆದು ವೈದ್ಯಕೀಯ ಶಿಕ್ಷಣ ಮುಗಿಸಿದ ಬಳಿಕ ಗ್ರಾಮೀಣ ವೈದ್ಯಕೀಯ ಸೇವೆ ಮಾಡುವುದರಿಂದ ಮತ್ತು ಗ್ರಾಮೀಣ ಸೇವೆಗೆ ಒಪ್ಪಿ ನೀಡಿರುವ ಬಾಂಡ್‌ಗಳಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ತಾಕೀತು ಮಾಡಿದೆ.
ರಾಜಸ್ತಾನ, ಹರಿಯಾಣ, ಕೇರಳ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸಹಿತ ವಿವಿಧ ಭಾಗಗಳ 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಬಳಿಕ ನ್ಯಾಯಪೀಠ ಈ ಆದೇಶ ನೀಡಿದೆ.
ಗ್ರಾಮೀಣ ವೈದ್ಯಕೀಯ ಸೇವೆ ಕಡ್ಡಾಯಗೊಳಿಸುವ ಹಿಂದೆ ಸರ್ಕಾರದ ಉತ್ತಮ ಉದ್ದೇಶ ಅಡಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದಾತ್ತವಾದ ಉದ್ದೇಶವಿದೆ. ಇಂತಹ ಪ್ರದೇಶಗಳ ಜನರಿಗೆ ಅಗತ್ಯ ಬಿದ್ದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಈ ಉದ್ದೇಶ ಕಾರ್ಯಸಾಫಲ್ಯವಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳು ಈ ಮಹಾನ್ ಸದಾಶಯದ ಭಾಗವಾಗಬೇಕು ಎಂದು ನ್ಯಾಯಪೀಠ ಹೇಳಿದೆ.
ಗ್ರಾಮೀಣ ಪ್ರದೇಶದ ಜನರೂ ಉತ್ತಮವಾದ ಆರೋಗ್ಯ ಪಡೆಯಲು ಹಕ್ಕುಳ್ಳವರಾಗಿದ್ದಾರೆ. ಅವರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಒದಗಿಸುವುದು ಪ್ರಭುತ್ವದ ಕರ್ತವ್ಯ. ಹಾಗಾಗಿ, ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಈ ಬಗ್ಗೆ ಕಾನೂನು ಜಾರಿಗೆ ತರಲು ಈ ಆದೇಶ ಸ್ವಾತಂತ್ಯವನ್ನು ನೀಡುತ್ತದೆ ಎಂಬುದನ್ನು ಆದೇಶ ಒತ್ತಿ ಹೇಳಿದೆ.
ಡಾ. ಶರಣ್ಯಾ ಮೋಹನ್ Vs ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕರ್ನಾಟಕ ಹೈಕೋರ್ಟ್, WP 7435/2021, Dated 22-05-2024