ಮೊದಲ ಡೈವರ್ಸ್ ಕೇಸು ರದ್ದು: ಎರಡನೇ ಬಾರಿ ಅರ್ಜಿ ಸಲ್ಲಿಸಿದರೂ ಊರ್ಜಿತ- ಹೈಕೋರ್ಟ್ ಮಹತ್ವದ ತೀರ್ಪು
ಮೊದಲ ಡೈವರ್ಸ್ ಕೇಸು ರದ್ದು: ಎರಡನೇ ಬಾರಿ ಅರ್ಜಿ ಸಲ್ಲಿಸಿದರೂ ಊರ್ಜಿತ- ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಅರ್ಜಿದಾರ ಪತಿ ಮೊದಲ ಬಾರಿ ಸಲ್ಲಿಸಿದ್ದ ವಿವಾಹ ವಿಚ್ಚೇದನ ಅರ್ಜಿ ವಿಚಾರಣೆ ನಡೆಯದೇ ರದ್ದುಗೊಂಡಿದ್ದರೆ, ಎರಡನೇ ಬಾರಿಗೆ ಅರ್ಜಿ ಸಲ್ಲಿಸಲು ಕಾನೂನಿನಲ್ಲಿ ಯಾವುದೇ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಅನು ಶಿವರಾಮನ್ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಮೊದಲ ವಿವಾಹ ವಿಚ್ಚೇದನ ಅರ್ಜಿ ತಿರಸ್ಕೃತಗೊಂಡ ನಂತರ ಸಲ್ಲಿಸಿದ್ದ ಎರಡನೇ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರ ಪತಿಯ ಮೇಲ್ಮನವಿಯಂತೆ ಪತ್ನಿಯಿಂದ ವಿಚ್ಚೇದನ ನೀಡಿದೆ.
ದಾಖಲೆಗಳನ್ನು ಪರಿಶೀಲಿಸಿದರೆ ಪತ್ನಿಯು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದಾರೆ. ಈ ದೂರಿನ ವಿಚಾರಣೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದು ಪತಿಯ ಅನೈತಿಕ ಸಂಬಂಧವನ್ನು ಪತ್ನಿ ಸಾಬೀತುಪಡಿಸಿಲ್ಲ. ಜೊತೆಗೆ ಪತಿಯ ಕಚೇರಿಗೆ ಹೋಗಿ ಅವರ ಸಹೋದ್ಯೋಗಿಗಳ ಮುಂದೆ ಅವಮಾನ ಮಾಡಿ ಹೀಯಾಳಿಸಿದ್ದಾರೆ. ಇದನ್ನು ಪತ್ನಿ ಪಾಟೀ ಸವಾಲಿನಲ್ಲಿ ನಿರಾಕರಿಸಿಲ್ಲ. ಇದನ್ನು ಪರಿಗಣಿಸಿದರೆ ಪತ್ನಿಯಿಂದ ಅರ್ಜಿದಾರ ಪತಿಯು ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂಬ ವಾದದಲ್ಲಿ ಹುರುಳಿದೆ. ಆದ್ದರಿಂದ ದಾಖಲೆಗಳನ್ನು ಪರಿಶೀಲಿಸಿದ ವಾದ, ಸಾಕ್ಷ್ಯವನ್ನು ಆಲಿಸಿ ಪತಿಯ ಕೋರಿಕೆಯನ್ನು ಮನ್ನಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
2007ರ ಜನವರಿ 28ರಂದು ಮದುವೆಯಾಗಿದ್ದ ಮೈಸೂರು ಜಿಲ್ಲೆಯ ದಂಪತಿಗೆ 2010ರಲ್ಲಿ ಗಂಡು ಮಗು ಜನಿಸಿತ್ತು. ಈ ಬಳಿಕ ದಂಪತಿ ನಡುವಿನ ಸಂಬಂಧ ಹಳಸಿತ್ತು. ಮಹಿಳೆಯು ತನ್ನ ಪತಿ ತವರು ಮನೆಯಿಂದ ಮೂರು ಲಕ್ಷ ರೂಪಾಯಿ ವರದಕ್ಷಿಣೆ ತರಲು ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಪತ್ನಿಯ ಆರೋಪ ಆಧಾರರಹಿತ ಎಂದು ಹೇಳಿ ಬಿ ವರದಿಯನ್ನು ಸಲ್ಲಿಸಿದ್ದರು.
ಮಗುವಿನ ಶೈಕ್ಷಣಿಕ ವಿಚಾರವಾಗಿಯೂ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು. ಪತಿ ಕುಡಿತಕ್ಕೆ ದಾಸರಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಅದರ ನಂತರ ಪತ್ನಿಯಿಂದ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಆರೋಪಿಸಿ ಪತಿ 2018ರಲ್ಲಿ ವಿವಾಹ ವಿಚ್ಚೇದನ ಕೋರಿ ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ Non Prosecution ಕಾರಣಕ್ಕೆ ವಜಾಗೊಂಡಿತ್ತು.
2019ರಲ್ಲಿ ಪತಿ ಮತ್ತದೇ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಚ್ಚೇದನ ಕೋರಿ ಹೊಸತಾಗಿ ಅರ್ಜಿ ಸಲ್ಲಿಸಿದ್ದರು. ಮೊದಲ ಅರ್ಜಿಯನ್ನು ಪುನರ್‌ಸ್ಥಾಪಿಸಲು ಅರ್ಜಿದಾರರು ಎರಡನೇ ಅರ್ಜಿಯಲ್ಲಿ ಮನವಿ ಮಾಡಿರಲಿಲ್ಲ. ಕ್ರೌರ್ಯವನ್ನೂ ಸಾಬೀತುಪಡಿಸಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಎರಡನೇ ಅರ್ಜಿಯನ್ನು ವಜಾಗೊಳಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಗೂ ವಿಚ್ಚೇದನ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: ಶಿವಕುಮಾರ್ ಆರ್. Vs ಸವಿತಾರಾಣಿ
ಕರ್ನಾಟಕ ಹೈಕೋರ್ಟ್ MFA No. 2062/2021 Dated 19-04-2024
ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ವಕೀಲ ಜಡ್ಜ್ ಎಂದು ಹೇಳಿಕೊಂಡ ದೃಶ್ಯ ವೈರಲ್! ವಕೀಲರ ಪರಿಷತ್ತಿನಿಂದ ನೋಟೀಸ್ ಜಾರಿ
https://www.courtbeatnews.com/2024/05/notice-to-advocate.html
ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಸಂದರ್ಭದಲ್ಲಿ ತಾನೊಬ್ಬ ನ್ಯಾಯಾಧೀಶ (ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಸುಳ್ಳು ಹೇಳಿಕೊಂಡಿದ್ದ ವಕೀಲನಿಗೆ ಗ್ರಹಚಾರ ತಗಲಿದೆ.
ಇಂತಹ ಕೃತ್ಯ ನಡೆಸಿದಾತ ವಕೀಲನ ಹೆಸರು ಪ್ರಕಾಶ್ ಸಿಂಗ್. ಈತನ ಈ ಕೃತ್ಯ ಗಮನಕ್ಕೆ ಬರುತ್ತಲೇ ಪಂಜಾಬ್ ಮತ್ತು ಹರ್ಯಾಣ ವಕೀಲರ ಪರಿಷತ್ತು ನೋಟೀಸ್ ಜಾರಿಗೊಳಿಸಿದೆ. ಪರಿಷತ್ತಿನ ಶಿಸ್ತು ಸಮಿತಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಯಾ ವಿವರಣೆ ನೀಡುವಂತೆ ಆರೋಪಿ ವಕೀಲರಿಗೆ ತಾಕೀತು ಮಾಡಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆಯ ದಿನ ನಿಗದಿ ಮಾಡಲಾಗಿದ್ದು, ನಿಗದಿತ ದಿನದಂದು ವಿಚಾರಣೆಗೆ ಹಾಜರಾಗದೇ ಇದ್ದರೆ ಪ್ರತಿವಾದಿಯನ್ನು ಶಿವಾಯಿ ಮಾಡಿ ಪ್ರಕರಣವನ್ನು ಏಕಪಕ್ಷೀಯ ಎಂದು ಪರಿಗಣಿಸಲಾಗುವುದು ಎಂದು ನೋಟೀಸ್‌ನಲ್ಲಿ ಎಚ್ಚರಿಕೆ ಮನೀಡಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ಅವರನ್ನು ತಡೆದು ನಿಲ್ಲಿಸಿದಾಗ, ನೀವೇಕೆ ನನ್ನನ್ನು ತಡೆದು ನಿಲ್ಲಿಸಿದಿರಿ. ನಾನು ನಿಮಗೆ ಚಾಲನಾ ಪರವಾನಿಗೆ ತೋರಿಸುವುದಿಲ್ಲ. ಸಬ್ ಇನ್ಸ್‌ಪೆಕ್ಟರ್ ಮಾತ್ರ ನನ್ನ ಲೈಸನ್ಸ್ ಕೇಳಬಹುದು ಎಂದು ಪೊಲೀಸರಿಗೆ ಎದುರುತ್ತರ ನೀಡಿದ್ದಾರೆ.
ಅಲ್ಲದೆ, ನಾನೊಬ್ಬ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ (ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ವಕೀಲರ ಪರಿಷತ್ತು ಆರೋಪಿ ವಕೀಲರಿಗೆ ನೋಟೀಸ್ ಜಾರಿಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ವಕೀಲ ಪ್ರಕಾಶ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 170, 186 ಮತ್ತು 419ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಿಂಗ್ ಅವರನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.