ವಕೀಲರ ಸೇವೆ: ಗ್ರಾಹಕರ ಹಿತರಕ್ಷಣಾ ಕಾಯ್ದೆ ವ್ಯಾಪ್ತಿಗಿಲ್ಲ- ಸುಪ್ರೀಂ ಕೋರ್ಟ್ ತೀರ್ಪಿನ ವ್ಯಾಖ್ಯಾನ
ವಕೀಲರ ಸೇವೆ: ಗ್ರಾಹಕರ ಹಿತರಕ್ಷಣಾ ಕಾಯ್ದೆ ವ್ಯಾಪ್ತಿಗಿಲ್ಲ- ಸುಪ್ರೀಂ ಕೋರ್ಟ್ ತೀರ್ಪಿನ ವ್ಯಾಖ್ಯಾನ
ವಕೀಲರ ವೃತ್ತಿ ಒಂದು ಅನನ್ಯ ವೃತ್ತಿ. ಅವರು ಕಕ್ಷಿದಾರರಿಗೆ ಸಲ್ಲಿಸುವ ಸೇವೆ ಗ್ರಾಹಕ ವ್ಯಾಪ್ತಿಗೆ ಹೊರತಾದದ್ದು. ಹಾಗಾಗಿ, ವಕೀಲರ ಸೇವಾ ನ್ಯೂನ್ಯತೆಗಾಗಿ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಅಡಿಯಲ್ಲಿ ವಕೀಲರ ವಿರುದ್ಧ ದಾಖಲಿಸುವ ದೂರುಗಳನ್ನು ಪುರಸ್ಕರಿಸಲು ಆಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ವಕೀಲ ವೃತ್ತಿ ಇತರ ಎಲ್ಲ ವೃತ್ತಿಗಿಂತ ಹೊರತಾದದ್ದು ಮತ್ತು ಅನನ್ಯವಾದದ್ದು. ವೃತ್ತಿಪರರಾಗಿ ವಕೀಲರು ಹೊಂದಿರುವ ಹೊಣೆ, ಅವರ ಸ್ಥಾನ ಮತ್ತು ಅವರು ನಿರ್ವಹಿಸುವ ಕರ್ತವ್ಯಗಳನ್ನು ಪರಿಗಣಿಸಿ ವಕೀಲ ವೃತ್ತಿ ವಿಶಿಷ್ಟವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ವೃತ್ತಿಯನ್ನು ವಾಣಿಜ್ಯ ವಹಿವಾಟು ಅಥವಾ ವ್ಯಾಪಾರ ವಹಿವಾಟಿನೊಂದಿಗೆ ಹೋಲಿಸಿ ನೋಡಲು ಸಾಧ್ಯವಿಲ್ಲ. ವೃತ್ತಿಪರರು ಒದಗಿಸುವ ಸೇವೆಗಳನ್ನು ಉದ್ಯಮಿಗಳು ಹಾಗೂ ವರ್ತಕರು ಒದಗಿಸುವ ಸೇವೆ ಜೊತೆಗೆ ಹೋಲಿಸಲು ಆಗದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ವಕೀಲರ ಸೇವೆಯು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗುಳಿಯುತ್ತದೆ. ವಕೀಲರು ಕಕ್ಷಿದಾರರ ಸ್ವಾಯತ್ತತೆಯನ್ನು ಗೌರವಿಸಬೇಕಿದ್ದು, ಕಕ್ಷಿದಾರರಿಂದ ಸ್ಪಷ್ಟ ಸೂಚನೆಗಳಿಲ್ಲದೆ ವಿನಾಯಿತಿಗಳನ್ನು ಪಡೆಯಲು ಮತ್ತು ಅಧಿಕಾರವನ್ನು ಉಲ್ಲಂಘಿಸಲು ಅವರು ಅರ್ಹರಾಗಿರುವುದಿಲ್ಲ. ವಕೀಲರಿಗೆ ತಮ್ಮ ಕಕ್ಷಿದಾರರ ಜೊತೆಗೆ ಗಣನೀಯ ಪ್ರಮಾಣದ ನೇರ ನಿಯಂತ್ರಣವು ಇರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವೈದ್ಯರಲ್ಲೂ ಗರಿಗೆದರಿದ ನಿರೀಕ್ಷೆ!
ಇದೇ ವೇಳೆ, ವೈದ್ಯ ವೃತ್ತಿಯನ್ನೂ ಗ್ರಾಹಕರ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ವಿಸ್ತೃತ ಪರಿಶೀಲನೆ ಅಗತ್ಯ ಎಂದು ನ್ಯಾಯಪೀಠ ಹೇಳಿದೆ. ಭಾರತೀಯ ವೈದ್ಯಕೀಯ ಸಂಘ Vs ಶಾಂತಾ ಪ್ರಕರಣದಲ್ಲಿ 1996ರಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠದಿಂದ ನೀಡಲಾದ ತೀರ್ಪನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿತು.
ಪ್ರಕರಣ: ಬಾರ್ ಆಫ್ ಇಂಡಿಯನ್ ಲಾಯರ್ಸ್ Vs ಡಿ.ಕೆ. ಗಾಂಧಿ ಪಿಎಸ್ ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಕಮ್ಯೂನಿಕೇಬಲ್ ಡಿಸೀಸ್
(ಸುಪ್ರೀಂ ಕೋರ್ಟ್)