ಆದೇಶ ಹಾಳೆಯಲ್ಲಿ 13 ವಕೀಲರ ಸಹಿ: ಹಿರಿಯ ಸಿವಿಲ್ ನ್ಯಾಯಾಧೀಶರ ವಿವರಣೆ ಕೇಳಿದ ಕರ್ನಾಟಕ ಹೈಕೋರ್ಟ್
ಆದೇಶ ಹಾಳೆಯಲ್ಲಿ 13 ವಕೀಲರ ಸಹಿ: ಹಿರಿಯ ಸಿವಿಲ್ ನ್ಯಾಯಾಧೀಶರ ವಿವರಣೆ ಕೇಳಿದ ಕರ್ನಾಟಕ ಹೈಕೋರ್ಟ್
ನ್ಯಾಯಾಲಯದ ಆದೇಶ ಹಾಳೆಯಲ್ಲಿ ಅನಗತ್ಯವಾಗಿ 13 ವಕೀಲರು ಸಹಿಯನ್ನು ಹಾಕಿದ ಪ್ರಕರಣಕ್ಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರ ವಿವರಣೆಯನ್ನು ಕೋರಿ ಮಾನ್ಯ ಕರ್ನಾಟಕ ಹೈಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
11-02-2016ರಂದು ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಂಖ್ಯೆ RA 11/2016ರ ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್ ಮತ್ತು ಪ್ರತಿವಾದಿಗಳಾದ ಮೃತ ಗಿರಿಜಾ ಬಾಯಿ (ಮಕ್ಕಳಾದ ಶ್ರೀನಿವಾಸ, ಕೃಷ್ಣ ರಾವ್, ಪುರುಷೋತ್ತಮ ಮತ್ತು ಮಗಳಾದ ಇಂದ್ರಾಣಿ), ಎರಡನೇ ಪ್ರತಿವಾದಿ ಯಶೋಧಾ ಬೆಳ್ಳಿರಾಯರ ನಡುವೆ ದಾಖಲಾಗಿತ್ತು.
ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್ ಅವರ ಪರವಾಗಿ ಅವರ ಅಧಿಕಾರ ಪತ್ರ ಹೊಂದಿದ ರಾಘವೇಂದ್ರ ರಾವ್ ಅವರು ವಾದ ಮಂಡಿಸಿದ್ದರು. ಪ್ರತಿವಾದಿಗಳಾದ ಗಿರಿಜಾ ಬಾಯಿ ಅವರ ಪರವಾಗಿ ನ್ಯಾಯವಾದಿ ಎಂ.ಕೆ. ವಿಜಯ್ ಕುಮಾರ್ ಮತ್ತು ಅವರ ಪುತ್ರ ವಿಪುಲ್ ತೇಜ್ ಮತ್ತು ಎರಡನೇ ಪ್ರತಿವಾದಿ ಯಶೋಧ ಬೆಳಿರಾಯ ಅವರ ಪರವಾಗಿ ನ್ಯಾಯವಾದಿ ಜಿ.ಎಂ. ಮುರಳೀಧರ ಭಟ್ ಅವರು ವಾದ ಮಂಡಿಸಿದ್ದರು.
ಮೇಲ್ಮನವಿದಾರರಾದ ಚಂದ್ರಶೇಖರ್ ರಾವ್, ಅವರ ಪತ್ನಿ ರಾಗಿಣಿ ಆಲಿಯಾಸ್ ರಕ್ಷಿತಾ ಮತ್ತು ಮಗನಾದ ರಾಘವೇಂದ್ರ ರಾವ್ ಅವರು ಕಾರ್ಕಳ ವಕೀಲರ ಸಂಘದ ಕೆಲ ಸದಸ್ಯ ವಕೀಲರ ವಿರುದ್ಧ ವೃತ್ತಿಧರ್ಮಕ್ಕೆ ವಿರುದ್ಧವಾದ ವ್ಯವಹಾರ ಯಾ ವರ್ತನೆ ಬಗ್ಗೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು, ರಾಜ್ಯ ವಕೀಲರ ಪರಿಷತ್ತು ಮತ್ತು ಮಾನ್ಯ ನ್ಯಾಯಾಧೀಶರಿಗೆ ದೂರು ನೀಡಿದ್ದರು.
ಈ ನಡುವೆ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರು ಕಾರ್ಕಳ ಪೊಲೀಸ್ ಉಪಾಧೀಕ್ಷಕರಿಗೆ 25-07-2023ರಂದು ದೂರು ನೀಡಿದ್ದು, ಅದನ್ನು ಪೊಲೀಸ್ ಉಪಾಧೀಕ್ಷಕರು ತಿರಸ್ಕರಿಸಿದ್ದರು. ಈ ವಿಚಾರವಾಗಿ ಕಾರ್ಕಳದ ಕೆಲ ವಕೀಲರು ಸೆಪ್ಟಂಬರ್ 11, 2023ರಂದು ನ್ಯಾಯಾಲಯದಲ್ಲಿ ಜಿಪಿಎ ಹೋಲ್ಡರ್ ಆಗಿರುವ ರಾಘವೇಂದ್ರ ರಾವ್ ಅವರ ಮೇಲೆ ಹಲ್ಲೆ ನಡೆಸಿ ನ್ಯಾಯಾಲಯದ ಆರ್ಡರ್ ಶೀಟ್ ಮೇಲೆ 13 ವಕೀಲರು ಸಹಿ ಮಾಡಿದ್ದರು ಎಂದು ದೂರಲಾಗಿದೆ.
ಆರ್ಡರ್ ಶೀಟ್ ಮೇಲೆ ಸಹಿ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆ ನೀಡುವಂತೆ ಹೈಕೋರ್ಟ್ ಮಾನ್ಯ ನ್ಯಾಯಾಧೀಶರಿಗೆ ನೋಟೀಸ್ ಜಾರಿಗೊಳಿಸಿದೆ. ಈ ಬಗ್ಗೆ ಹೈಕೋರ್ಟ್‌ನಲ್ಲಿ ಚಂದ್ರಶೇಖರ್ ರಾವ್ ಅವರ ಪರವಾಗಿ ನ್ಯಾಯವಾದಿ ವಿ.ಕೆ. ಶ್ರೀಕಾಂತ್ ವಾದ ಮಂಡಿಸಿದ್ದರು.