ರಾಜ್ಯ ಸರ್ಕಾರಿ ನೌಕರರ ಸಂಘದ ಧೀಮಂತ ನಾಯಕಿ ಮೇರಿ ದೇವಾಸಿಯಾ: ಅವಿಸ್ಮರಣಿಯ ಚಿರನೆನಪು
ರಾಜ್ಯ ಸರ್ಕಾರಿ ನೌಕರರ ಸಂಘದ ಧೀಮಂತ ನಾಯಕಿ ಮೇರಿ ದೇವಾಸಿಯಾ: ಅವಿಸ್ಮರಣಿಯ ಚಿರನೆನಪು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ಕಂಡ ಮಹಾನ್ ನಾಯಕಿ ಕಾಮ್ರೇಡ್ ಮೇರಿ ದೇವಾಸಿಯಾ
ಕಾಮ್ರೇಡ್ ಮೇರಿ ದೇವಾಸಿಯಾ ಅವರು 1963 -- 1967 ರ ವರೆಗೆ ಆಗಿನ ಮೈಸೂರು ರಾಜ್ಯದ ಎನ್.ಜಿ.ಒ. (ನಾನ್ ಗೆಜೆಟೆಡ್ ಆಫೀಸರ್ಸ್) ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಸಂಘಕ್ಕೆ ಹೊಸ ಆಯಾಮ ನೀಡಿದರು.
ಆ ಕಾಲದಲ್ಲಿ NGO ಸಂಘದ ಸದಸ್ಯತ್ವ ಪಡೆಯಲು ಪತ್ರಾಂಕಿತ ಅಧಿಕಾರಿಗಳಿಗೆ ಮತ್ತು ಡಿ ಗ್ರೂಪ್ ನೌಕರರಿಗೆ ಅವಕಾಶವಿರಲಿಲ್ಲ. 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಹೊಂದಿದ ಬಳಿಕ ರಾಜ್ಯದ ಸಮಸ್ತ ಸರಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಘಟನೆಯಾಗಿ ಹಿಂದಿನ ಮೈಸೂರು ಎನ್‌ಜಿಓ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಎಂದು ಮರುನಾಮಕರಣಗೊಂಡಿತು.
ತೀರಾ ದಯನೀಯ ಸ್ಥಿತಿಯಲ್ಲಿದ್ದ ಆಗಿನ ನೌಕರರ ಜೀವನ ಸ್ಥಿತಿಯನ್ನು; ಸೇವಾ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಪಣತೊಟ್ಟ ಮೇರಿ ದೇವಾಸಿಯಾ ಅವರು ನೌಕರರ ಸಂಘಟನೆಗಾಗಿ ಬೆಂಗಳೂರಿನ ಎಲ್ಲ ಸರಕಾರಿ ಕಚೇರಿಗಳಿಗೆ ಬೈಸಿಕಲ್‌ನಲ್ಲಿ ಹೋಗುತ್ತಿದ್ದರು.
ಆ ಕಾಲದಲ್ಲಿ ವೈಜ್ಞಾನಿಕವಾದ ರೀತಿಯಲ್ಲಿ ವೇತನಗಳನ್ನು ನಿಗದಿಪಡಿಸಿರಲಿಲ್ಲ. ಕೇಂದ್ರ ಸರಕಾರಿ ನೌಕರರಿಗೆ ಸಮನಾದ ತುಟ್ಟಿ ಭತ್ಯೆಯನ್ನು ರಾಜ್ಯ ಸರಕಾರಿ ನೌಕರರಿಗೆ ನೀಡುತ್ತಿರಲಿಲ್ಲ. ಆ ಕಾಲದ ಗ್ರೂಪ್ ಡಿ ನೌಕರರ ವೇತನ ರೂ. 20ರಿಂದ 25 ಆಗಿತ್ತು. ವಾರ್ಷಿಕ ವೇತನ ಬಡ್ತಿ ಒಂದು ರೂಪಾಯಿ ಇತ್ತು. ಎ, ಬಿ, ಸಿ, ಡಿ ವರ್ಗಗಳ ನೌಕರರಿಗೆ ಬೇರೆ ಬೇರೆ ತುಟ್ಟಿಭತ್ಯೆ ದರ ನಿಗದಿಯಾಗಿತ್ತು. ರಾಜ್ಯ ಸರಕಾರ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಬೇಕಾದರೆ ಮುಷ್ಕರ ಹೂಡುವ ಪರಿಸ್ಥಿತಿ ಇತ್ತು.
ಈ ಎಲ್ಲಾ ಅಸಮಾನತೆಗಳನ್ನು ತೊಡೆದು ಹಾಕಲು ಅವರು ನಡೆಸಿದ ಹೋರಾಟಗಳು ಸಂಘಕ್ಕೆ ಹೊಸ ಆಯಾಮ ನೀಡಿದವು. *ಅವರು ಸರಕಾರ ಒಡ್ಡಿದ ಯಾವ ಆಸೆ ಆಮಿಷಗಳಿಗೆ ಒಳಗಾಗದೆ* ನೌಕರರ ಹಿತಕ್ಕಾಗಿ ಪಣತೊಟ್ಟು ರಾಜ್ಯಾದ್ಯಂತ ಎಲ್ಲ ತಾಲ್ಲೂಕುಗಳಿಗೆ ಪ್ರವಾಸ ಮಾಡಿ ನೌಕರರನ್ನು ಸಂಘಟಿಸಿದರು. ಸಂಘಟನೆ ಆಧಾರದ ಮೇಲೆ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು. ಅಂದಿನ ಸರಕಾರ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸಿದಾಗ ಹೋರಾಟದ ಮಾರ್ಗ ಅನಿವಾರ್ಯವಾಯಿತು.
ರಾಜ್ಯಾದ್ಯಂತ ಬಹಿರಂಗ ಸಭೆಗಳು, ಮೆರವಣಿಗೆಗಳು ನಡೆದವು. ಘೋಷಣೆಗಳು ಮೊಳಗಿದವು. ಬೆಂಗಳೂರಿನ ಮೈಸೂರು ಬ್ಯಾಂಕ್ ಚೌಕದ ಬಳಿ ನೌಕರರ ಬೃಹತ್ ಮೆರವಣಿಗೆ ಮೇಲೆ ಲಾಠಿ ಪ್ರಹಾರಗಳು ನಡೆದವು. ನೌಕರರು ಹಿಂಜರಿಯಲಿಲ್ಲ. ಮೇರಿ ದೇವಾಸಿಯಾ ಅವರ ಸಮರ್ಥ ನಾಯಕತ್ವದಲ್ಲಿ ನೌಕರರು ಸಂಘಟಿತರಾಗಿದ್ದರು. ಯಶಸ್ವಿ ಮುಷ್ಕರಗಳು ನಡೆದವು.
ಜನವರಿ 1965ರ ಮುಷ್ಕರವನ್ನು ಜಂಟಿ ಹೋರಾಟವಾಗಿ ಸಂಘಟಿಸಿದ್ದರು. ವಿದ್ಯುತ್ ಪೌರಸೇವಾ ಮತ್ತು ಸರಕಾರಿ ನೌಕರರ ಈ ಮುಷ್ಕರ ಅತ್ಯಂತ ಯಶಸ್ವಿಯಾಯಿತು. ಸರಕಾರವು ಮೇರಿ ದೇವಾಸಿಯಾ ಮತ್ತಿತರ ಪದಾಧಿಕಾರಿಗಳನ್ನು ದಸ್ತಗಿರಿ ಮಾಡಿ 1-5-1965ರಂದು ಮೇರಿ ದೇವಾಸಿಯಾ ಅವರನ್ನು ಸೇವೆಯಿಂದ ವಜಾ ಮಾಡಿತು.
ನೌಕರರ ಮುಂದಾಳುಗಳ ಮೇಲೆ ಕೇಸುಗಳನ್ನು ಹೂಡಲಾಗಿತ್ತು. ಆದರೆ ನೌಕರರ ಮನೋಸ್ಥೈರ್ಯ ಕಳೆಗುಂದಲಿಲ್ಲ. ಹೋರಾಟ ನಿಲ್ಲಲಿಲ್ಲ. ಬೆಳಗಾವಿ ಜೈಲಿನಿಂದ ಬೆಂಗಳೂರಿಗೆ ಬಂದ ಕಾಮ್ರೇಡ್ ಮೇರಿ ದೇವಾಸಿಯಾರಿಗೆ ನೌಕರರು ಅಭೂತಪೂರ್ವ ಸ್ವಾಗತ ಕೋರಿದರು. 1967ರ ವರೆಗೆ ಮೇರಿ ದೇವಾಸಿಯಾ ಸಂಘವನ್ನು ಮುನ್ನಡೆಸಿದರು. ಆ ಕಾಲಕ್ಕೆ ದೇಶಾದ್ಯಂತ ನೌಕರರ ಹೋರಾಟಗಳಿಗಾಗಿ ಸೇವೆಯಿಂದ ವಜಾ ಹೊಂದಿದ ನಾಯಕರಲ್ಲಿ ಮಹಿಳಾ ನಾಯಕಿಯಾಗಿ ದೇವಾಸಿಯಾ ಮೊದಲಿಗರಾಗಿದ್ದರು.
ಅಷ್ಟೊತ್ತಿಗಾಗಲೇ ರಾಷ್ಟಮಟ್ಟದಲ್ಲಿ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸ್ಥಾಪನೆಗೆ ಆಂಧ್ರಪ್ರದೇಶದ ಶ್ರೀರಾಮುಲು ಮತ್ತು ಪ.ಬ೦ಗಾಳದ ಘೋಷ್ ಅವರ ಜೊತೆಯಲ್ಲಿ ಕಾರ್ಯ ನಿರ್ವಹಿಸಿದ ಮೇರಿ ದೇವಾಸಿಯಾ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಸಂಸ್ಥಾಪಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸೇವೆಯಿಂದ ವಜಾ ಮಾಡಿದ್ದರ ವಿರುದ್ಧ ಸಂಘ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತು.
1981ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮೇರಿ ದೇವಾಸಿಯಾ ಪರವಾಗಿ ಬಂತು. ಅಷ್ಟೊತ್ತಿಗಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೆುಾಡಗಿಸಿಕೊಂಡಿದ್ದ ಮೇರಿ ದೇವಾಸಿಯಾ ಸರಕಾರಿ ಸೇವೆಗೆ ಹಿಂತಿರುಗಲಿಲ್ಲ. ಮೇರಿ ದೇವಾಸಿಯಾ ಅವರು ಸಂಘದ ಮುಖವಾಣಿ ಪತ್ರಿಕೆಯಾದ "MYSORE NGO"ದ ಸಂಪಾದಕರಾಗಿ ಮೊನಚಾದ ವಿಚಾರ ಪುಾರಿತ ಲೇಖನಗಳನ್ನು ಸ್ವತಃ ಬರೆಯುತ್ತಿದ್ದರು. ಅವರಿಗೆ ವೈಯಕ್ತಿಕ ಆಸೆ ಆಕಾಂಕ್ಷೆಗಳು ಇರಲಿಲ್ಲ. ಮದುವೆ ಆಗಿರಲಿಲ್ಲ. ಉಡುಗೆ ತೊಡಗೆಗಳು ತೀರಾ ಸರಳವಾಗಿದ್ದು ಖಾದಿ ಸೀರೆ ಸದಾ ಉಡುತ್ತಿದ್ದರು. ನೌಕರರನ್ನು ಕಂಡರೆ ಪ್ರೀತಿ ವಾತ್ಸಲ್ಯ ಅವರ ಹೃದಯಾಂತರಾಳದಲ್ಲಿ ಮನೆ ಮಾಡಿದ್ದವು.
ಸೇವೆಯಿಂದ ವಜಾ ಆದ ಮೇಲೆ ಬೆಂಗಳೂರು ಸಮೀಪದ ವೈಟ್ ಫೀಲ್ಡ್ ನ ಒಂದು ಹಳೆಯ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿನ ಆಂಗ್ಲೋ ಇಂಡಿಯನ್ ಜನರ ಉಪಯೋಗಕ್ಕಾಗಿ ಕೆಲವು ಕಾಲ ಪಡಿತರ ಅಂಗಡಿ /ಸೀಮೆಎಣ್ಣೆ ಅಂಗಡಿ ನಡೆಸುತ್ತಿದ್ದರು. ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಹ ಆಗಿದ್ದರು. ಅವರಿಗೆ ತೀವ್ರ ಅಸ್ತಮಾ ಕಾಯಿಲೆ ಜೀವನ ಪೂರ್ತಿ ಕಾಡಿತು. ಇಂತಹ ನಿಸ್ವಾರ್ಥ ಮಹಿಳೆ ಜೀವಿತಾವಧಿಯಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದರು.
ಆರ್ಥಿಕವಾಗಿ ಬಳಲಿದರು. ಎಷ್ಟೋ ಸಾರಿ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಕ್ಕೆ ಅವರಿಗೆ ಕಷ್ಟವಾಗುತ್ತಿತ್ತು . ಅಸ್ತಮಾದಿಂದ ಬೆಂಗಳೂರಿನ ಸಿಂಧಿ ಆಸ್ಪತ್ರೆಯಲ್ಲಿ 13.9.1993ರಂದು ತಮ್ಮ ಅರುವತ್ತಾರನೇ ವಯಸ್ಸಿನಲ್ಲಿ ನಿಧನರಾದರು. ಸುದ್ದಿತಿಳಿದ ನೌಕರರು ವೈಟ್ ಫೀಲ್ಡ್ ಗೆ ತೆರಳಿ ಆ ಮಹಾನ್ ಮಹಿಳೆಗೆ ಅಂತಿಮ ನಮನಗಳನ್ನು ಸಲ್ಲಿಸಿದರು.
ಸಚಿವಾಲಯದಲ್ಲಿ ಕಿರಿಯ ಸಹಾಯಕರಾಗಿ ಕೇವಲ ಹದಿನೈದು ವರ್ಷಗಳ ಸರಕಾರಿ ಸೇವೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಗೆ; ಚಳವಳಿಗೆ ಭವ್ಯ ಬುನಾದಿಯನ್ನು ಹಾಕಿದ ಕೀರ್ತಿ ಕಾಮ್ರೇಡ್ ಮೇರಿ ದೇವಾಸಿಯಾ ಅವರಿಗೆ ಸಲ್ಲುತ್ತದೆ. ಅವರ ತ್ಯಾಗ ಮತ್ತು ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರು ಅನೇಕ ಸೇವಾ ಸೌಲಭ್ಯಗಳನ್ನು ಹೊಂದಲು ಸಾಧ್ಯವಾಯಿತು. ಅಂತಹ ಮಹಾನ್ ನಾಯಕಿಯನ್ನು ಸ್ಮರಿಸಬೇಕಾದದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರು ಬೆಳೆಸಿದ ಸಂಘಟನಾ ಮೌಲ್ಯಗಳನ್ನು ಎತ್ತಿ ಹಿಡಿಯುವುದರ ಮೂಲಕ ಅವರ ಆಶಯವನ್ನು ಈಡೇರಿಸಬೇಕಾಗಿರುವುದು ಸಂಘದ ಎಲ್ಲಾ ಪದಾಧಿಕಾರಿಗಳ ಆದ್ಯ ಕರ್ತವ್ಯವಾಗಿದೆ.
ದಿವಂಗತ ಕಾಮ್ರೇಡ್ ಮೇರಿ ದೇವಾಸಿಯ ಅವರ 25ನೆಯ ವರ್ಷದ ಪುಣ್ಯತಿಥಿಯ ದಿನಾಂಕ 13.9.2018ರಂದು ನಮ್ಮ ಕೇಂದ್ರ ಸಂಘವು ಸುತ್ತೋಲೆಯನ್ನು ಹೊರಡಿಸಿ ಪ್ರತಿ ವರ್ಷ ಸಪ್ಟೆಂಬರ್ ತಿಂಗಳ 13ನೇ ತಾರೀಖಿನಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಶಾಖೆಗಳು ಸ್ಮೃತಿ ದಿನ ಆಚರಿಸುವುದರ ಮೂಲಕ ದಿವಂಗತ ಕಾಮ್ರೇಡ್ ಮೇರಿ ದೇವಾಸಿಯಾ ಅವರಿಗೆ ನಮನ ಸಲ್ಲಿಸುವಂತೆ ಸೂಚಿಸಿರುವುದು ಸ್ತುತ್ಯಾರ್ಹ.
ಐಷಾರಾಮಿ ಜೀವನಕ್ಕೆ ಹಾತೊರೆಯುವ ಇಂದಿನ ನೌಕರರ ಸಂಘಟನೆಯ ನಾಯಕರುಗಳಿಗೆ ಸರಳ ಜೀವನ ಮತ್ತು ಉದಾತ್ತ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ದಿವಂಗತ ಕಾಮ್ರೇಡ್ ಮೇರಿ ದೇವಾಸಿಯಾ ಅವರ ಬದುಕು-ಬವಣೆ ಕಪೋಲ ಕಲ್ಪಿತ ಕಥೆ ಎನಿಸಬಹುದು.
ದಿವಂಗತ ಮೇರಿ ದೇವಾಸಿಯ ಅವರ ನೆನಪು ಸದಾ ಉಳಿಯಲಿ ಮತ್ತು ಅವರ ಬದುಕು ನಮಗೆ ದಾರಿದೀಪವಾಗಲಿ.
✍️ ಪ್ರಕಾಶ್ ನಾಯಕ್, ನಿರ್ದೇಶಕರು ಹಾಗೂ ನಿಕಟಪೂರ್ವ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು