ಪ್ರಾಣಿಬಲಿಗೆ ಅನುಮತಿ ನೀಡಿದ್ದ ಮಹಾನಗರ ಪಾಲಿಕೆ: ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಪ್ರಾಣಿಬಲಿಗೆ ಅನುಮತಿ ನೀಡಿದ್ದ ಮಹಾನಗರ ಪಾಲಿಕೆ: ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಹಿನ್ನೆಲೆಯಲ್ಲಿ ಪ್ರಾಣಿಬಲಿಗೆ ಅನುಮತಿ ನೀಡಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಜೂನ್ 17ರಂದು 67 ಖಾಶಗಿ ಮಾಂಸದ ಅಂಗಡಿಗಳು ಮತ್ತು ಪಾಲಿಕೆಯ 47 ಮಾರುಕಟ್ಟೆಗಳಲ್ಲಿ ಪ್ರಾಣಿ ಬಲಿಗೆ ಅನುಮತಿಸಿ ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಮುಂಬೈನ ಜೀವ ಮೈತ್ರಿ ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿತ್ತು. ಬಿಎಂಸಿ ಸುತ್ತೋಲೆಗೆ ತುರ್ತು ತಡೆ ಕೋರಿದ್ದ ಜೀವ ಮೈತ್ರಿ ಟ್ರಸ್ಟ್ ಮತ್ತೊಬ್ಬರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡ ಬಾಂಬೆ ಹೈಕೋರ್ಟ್‌ನ ನ್ಯಾ. ಎಂ.ಎಸ್. ಸೋನಕ್ ಮತ್ತು ನ್ಯಾ ಕಮಲ್ ಖಾತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪ್ರಾಣಿ ಹತ್ಯೆಗೆ ಸಂಬಂಧಿಸಿದ ಬಿಎಂಸಿಯ ಸುತ್ತೋಲೆ ಅದರ ಸ್ವಂತ ನೀತಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದರು. ವಿಮಾನ ಕಾಯ್ದೆಯನ್ನು ಉಲ್ಲಂಘಿಸಿ ವಿಮಾನ ನಿಲ್ದಾಣಗಳ ಪಕ್ಕದಲ್ಲಿ ಇರುವ ಮಾಂಸದ ಅಂಗಡಿಗಳಿಗೆ ಮಟನ್ ಕಟ್ ಮಾಡಲು ಅವಕಾಶ ನೀಡಲಾಗಿದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದ್ದರು.
ಹಬ್ಬ ಹರಿದಿನಗಳಲ್ಲಿ ಜೂನ್ 17ರಿಂದ 19ರ ವರೆಗೆ ಮಾತ್ರ ಖಾಸಗಿ ಅಂಗಡಿಗಳು ಮತ್ತು ಪಾಲಿಕೆ ಮಾರುಕಟ್ಟೆಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ 72 ಸಂಸ್ಥೆಗಳಿಗೆ ಅನುಮತಿ ನೀಡಿದ್ದನ್ನು ಅರ್ಜಿದಾರರು ಸೇರಿದಂತೆ ಯಾರೂ ಪ್ರಶ್ನಿಸಿಲ್ಲ ಎಂದು ಪಾಲಿಕೆ ಪರ ವಕೀಲರು ವಾದಿಸಿದರು.
ವಾದ ವಿವಾದ ಆಲಿಸಿದ ನ್ಯಾಯಾಲಯ, ಯಾವುದೇ ಸೆಕ್ಷನ್ ಉಲ್ಲಂಘನೆಯಾದರೆ, ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನದಂತೆ ದೂರು ಸಲ್ಲಿಸಲು ಸೂಕ್ತ ವ್ಯವಸ್ಥೆ ಇದೆ. ಅದೇ ಕಾರ್ಯವಿಧಾನ ಈಗಲೂ ಜಾರಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದು, ಅರ್ಜಿದಾರರು ಕೋರಿದಂತೆ ಪರಿಹಾರ ನೀಡಲು ನಿರಾಕರಿಸಿತು.
ಪ್ರಕರಣ: ಜೀವ ಮೈತ್ರಿ ಟ್ರಸ್ಟ್ Vs ಭಾರತ ಸರ್ಕಾರ (ಬಾಂಬೆ ಹೈಕೋರ್ಟ್)