ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹುಟ್ಟುಹಬ್ಬ ನಿಷೇಧ: ಸರ್ಕಾರಿ ಸುತ್ತೋಲೆಯ ಕುರಿತು ವಿವರ
ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹುಟ್ಟುಹಬ್ಬ ನಿಷೇಧ: ಸರ್ಕಾರಿ ಸುತ್ತೋಲೆಯ ಕುರಿತು ವಿವರ
ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಖಾಸಗಿ ವ್ಯಕ್ತಿಗಳ ಅಥವಾ ಅವರ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲು ನಿಷೇಧವಿದೆ.
ಸರ್ಕಾರ ಈ ಬಗ್ಗೆ ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಸೆಲೆಬ್ರಿಟಿಗಳು ಸೇರಿದಂತೆ ಖಾಸಗಿ ವ್ಯಕ್ತಿಗಳು ಹಾಗೂ ಅವರ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ.
ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ರಾಜಕೀಯ ಮುಖಂಡರು, ಖಾಸಗಿ ವ್ಯಕ್ತಿಗಳು, ಮಠಾಧೀಶರು ಹಾಗೂ ಸೆಲೆಬ್ರಿಟಿಗಳು ತಮ್ಮ ಹಾಗೂ ತಮ್ಮ ಮಕ್ಕಳ ಜನ್ಮ ದಿನವನ್ನು ಕೇಕ್ ಕತ್ತರಿಸುವ ಅಥವಾ ಇನ್ನಿತರ ರೀತಿಯಲ್ಲಿ ಆಚರಿಸುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು, ಇದಕ್ಕೆ ಬ್ರೇಕ್ ಹಾಕಲು ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಈ ರೀತಿಯ ಆಚರಣೆಗಳಿಂದ ಮತ್ತು ಅದ್ದೂರಿ ಕಾರ್ಯಕ್ರಮಗಳಿಂದ ಮಕ್ಕಳ ಮನಸ್ಸಿಗೆ ದುಷ್ಪರಿಣಾಮ ಉಂಟಾಗುತ್ತದೆ. ಶಾಲಾ ಮಕ್ಕಳಿಗೆ ಯಾ ಮಕ್ಕಳ ಪಾಲನಾ ಸಂಸ್ಥೆಯ ಮಕ್ಕಳಿಗೆ ಅವರ ಹುಟ್ಟುಹಬ್ಬ ಈ ರೀತಿ ಅಚರಿಸಿಕೊಳ್ಳಲು ಸಾಧ್ಯವಾಗದೇ ಆಚರಿಸಲ್ಪಡುತ್ತಿರುವವರ ಹುಟ್ಟುಹಬ್ಬದೊಂದಿಗೆ ಹೋಲಿಕೆ ಮಾಡಿಕೊಂಡರೆ ಮಕ್ಕಳ ಮನಸ್ಸಿಗೆ ಆಘಾತವಾಗುತ್ತದೆ.
ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಿದ್ದು, ಇಂತಹ ಆಚರಣೆಗಳು ಸದರಿ ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಉಂಟಾಗುವ ಸಂಭವವಿದೆ ಎಂದು ಮನೋವಿಜ್ಞಾನಿಗಳು ಅಭಿಮತ ನೀಡಿದ್ದಾರೆ.
ಮಕ್ಕಳು ಕುಟುಂಬದಲ್ಲಿ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲಲ ಎಂಬ ಭಾವನೆಯನ್ನು ಕಾಪಾಡುವ ಸಲುವಾಗಿಈ ಮಕ್ಕಳ ಹುಟ್ಟುಹಬ್ಬ ಹಾಗೂ ಸರ್ಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಹುಟ್ಟುಹಬ್ಬಗಳ ಆಚರಣೆಯನ್ನು ಹೊರತುಪಡಿಸಿ, ಸರ್ಕಾರಿ, ಅನುದಾನಿತ, ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬೇರೆ ಯಾರ ಹುಟ್ಟುಹಬ್ಬಗಳನ್ನು ಆಚರಿಸುವುದನ್ನು ನಿಷೇಧಿಸಲಾಗಿದೆ.