ವಕೀಲರ ರಕ್ಷಣೆಗೆ ಕಾಯ್ದೆಗೆ ಹಿರಿಯ ವಕೀಲ ಭೀಮಸೇನ ಬಾಗಿ ಸ್ವಾಗತ
ಹುಕ್ಕೇರಿ: ವಕೀಲರ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023 ರಾಜ್ಯ ಸರ್ಕಾರ ಜಾರಿಗೆ ತಂದಿರುವು ದರಿಂದ ಇನ್ನು ವಕೀಲರು ಭಯವಿಲ್ಲದೆ ಕಾರ್ಯನಿರ್ವಹಿಸ ಬಹುದಾಗಿದೆ ಎಂದು ಹಿರಿಯ ನ್ಯಾಯವಾದಿ ಭೀಮಸೇನ ಬಾಗಿ ತಿಳಿಸಿದ್ದಾರೆ.
ಸರ್ಕಾರ ಗೆಜೆಟ್ ಅಧಿಸೂಚನೆ ಪ್ರಕಟಿಸಿದ್ದು ವಕೀಲರು ಕಾರ್ಯನಿರ್ವ ಹಿಸುವಾಗ ಯಾವುದೇ ವ್ಯಕ್ತಿಯು ನ್ಯಾಯವಾದಿಗಳ ಮೇಲೆ ಹಲ್ಲೆ ಅಥವಾ ಹಿಂಸಾಚಾರ ಕೃತ್ಯ ಎಸಗತಕ್ಕದ್ದಲ್ಲ. ಒಂದು ವೇಳೆ ಯಾರಾದರೂ ಹಿಂಸಾಚಾರ ನಡೆಸಿದರೆ ಅಂತಹ ವ್ಯಕ್ತಿಗೆ 6 ತಿಂಗಳಿಂದ 3 ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ವೃತ್ತಿಪರ ವಕೀಲರು ನೆಮ್ಮದಿಯಿಂದ ಸೇವೆ ಸಲ್ಲಿಸಲು ಅನುಕೂಲವಾಗಿದೆ ಎಂದು ಬಾಗಿ ಹೇಳಿದ್ದಾರೆ.
----------
ನನಸಾದ ವಕೀಲರ ಬಹುದಿನಗಳ ಕನಸು: ಜಾರಿಗೆ ಬಂತು "ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ"
ಜೂನ್ 10, 2024ರಿಂದ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಗಜೆಟ್ ನೋಟಿಫಿಕೇಶನ್ ಪ್ರಕಟಿಸಿದ್ದು, ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಿದೆ.
2023ರ ಡಿಸೆಂಬರ್ 11ರಂದು ರಾಜ್ಯದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಈ ಮಸೂದೆಯನ್ನು ಮಂಡಿಸಿದ್ದರು. ಇದು ಅನುಮೋದನೆಗೊಂಡು ಮಾರ್ಚ್ 20ರಂದು ರಾಜ್ಯಪಾಲರ ಅಂಕಿತಕ್ಕೂ ಒಳಗಾಯಿತು.
ಕರ್ತವ್ಯನಿರತ ವಕೀಲರಿಗೆ ಈ ಕಾನೂನು ರಕ್ಷಣೆ ನೀಡಲಿದೆ. ಇನ್ನು ಮುಂದೆ ಕರ್ತವ್ಯ ನಿರತ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ನಡೆದರೆ, ಕೃತ್ಯವೆಸಗಿದ ವ್ಯಕ್ತಿಯು ಆರು ತಿಂಗಳಿನಿಂದ ಮೂರು ವರ್ಷದ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಒಳಗಾಗುತ್ತಾರೆ. ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಬಹುದಾಗಿದೆ. ಅಥವಾ ಎರಡನ್ನೂ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಪೊಲೀಸರು ಬಂಧಿಸಿದಾಗ ಏನು ಮಾಡಬೇಕು?
ಸಂಜ್ಞೇಯ ಅಪರಾಧದ ಕುರಿತು ವಕೀಲರನ್ನು ಪೊಲೀಸರು ಬಂಧಿಸಿದಾಗ ಅಂತಹ ಬಂಧನದ ಬಗ್ಗೆ ಪೊಲೀಸರು ಆರೋಪಿ ವಕೀಲರು ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಮಾಹಿತಿ ನೀಡಬೇಕು.
ದಂಡನೀಯವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಕಡಿಮೆ ಇಲ್ಲದ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.