ಪ್ರಧಾನಿ, ಮುಖ್ಯಮಂತ್ರಿ, ಡಿಸಿಎಂ ಬಗ್ಗೆ ಕೆಟ್ಟ ಭಾಷೆ ಬಳಸಬಾರದು: ಬಿಜೆಪಿ ರಾಜ್ಯಾಧ್ಯಕ್ಷರು, ಐಟಿ ಸೆಲ್ ಚೀಫ್‌ಗೆ ಹೈಕೋರ್ಟ್ ನೀತಿಪಾಠ
ಪ್ರಧಾನಿ, ಮುಖ್ಯಮಂತ್ರಿ, ಡಿಸಿಎಂ ಬಗ್ಗೆ ಕೆಟ್ಟ ಭಾಷೆ ಬಳಸಬಾರದು: ಬಿಜೆಪಿ ರಾಜ್ಯಾಧ್ಯಕ್ಷರು, ಐಟಿ ಸೆಲ್ ಚೀಫ್‌ಗೆ ಹೈಕೋರ್ಟ್ ನೀತಿಪಾಠ
ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಐಟಿ ಸೆಲ್ ಮುಖ್ಯಸ್ಥರಿಗೆ ನೀತಿಪಾಠ ಬೋಧಿಸಿದೆ.
ತಮ್ಮ ವಿರುದ್ದದ ಎಫ್‌ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್ ಮಾಕನೂರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಬುದ್ದಿವಾದ ಹೇಳಿದೆ.
ಚುನಾವಣೆ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮತ್ತು ಮೆದುಳು ಇವೆರಡರ ನಡುವಿನ ಸೇತುವೆ ಕುಸಿಯಬಾರದು ಎಂದು ನೀತಿ ಪಾಠ ಹೇಳಿದ ನ್ಯಾಯಪೀಠ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಐಟಿ ಸೆಲ್ ಮುಖ್ಯಸ್ಥರು ಬಳಸಿರುವ ಭಾಷೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿತು.
ದೇಶದ ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಮತ್ತು ಸಂಯಮ ಇರಬೇಕು ಎಂದು ಅರ್ಜಿದಾರರಿಗೆ ನ್ಯಾಯಪೀಠ ಮೌಖಿಕವಾಗಿ ಬೋಧನೆ ಮಾಡಿತು.
ಚುನಾವಣೆ ಸಂದರ್ಭದಲ್ಲಿ ಏನೇನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಭಾಷಾ ಪ್ರಯೋಗ ಮಾಡಬೇಕು. ಈ ಸಂದರ್ಭದಲ್ಲಿ ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು ಎಂದು ಮಾರ್ಮಿಕವಾಗಿ ಹೇಳಿತು.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಐಟಿ ಸೆಲ್ ಮುಖ್ಯಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.