ವಸ್ತ್ರಸಂಹಿತೆ ಉಲ್ಲಂಘಿಸಿದ ವಕೀಲರ ವಿರುದ್ಧ ಶಿಸ್ತು ಕ್ರಮ: ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್ ತಾಕೀತು
ವಸ್ತ್ರಸಂಹಿತೆ ಉಲ್ಲಂಘಿಸಿದ ವಕೀಲರ ವಿರುದ್ಧ ಶಿಸ್ತು ಕ್ರಮ: ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್ ತಾಕೀತು
ನಿಯಮಗಳ ಪ್ರಕಾರ ನಿಗದಿಪಡಿಸಿದ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿ ನ್ಯಾಯಾಲಯದ ಕಲಾಪದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾದ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್ತಿಗೆ ಬಾಂಬೆ ಹೈಕೋರ್ಟ್ ತಾಕೀತು ಮಾಡಿದೆ.
ಬಾಂಬೆ ಹೈಕೋರ್ಟ್‌ನ ನ್ಯಾ. ಪೃಥ್ವಿರಾಜ್ ಚೌಹಾಣ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ವಕೀಲರಾದ ಜಗದೀಶ್ ಎಂ. ಅಹುಜಾ ಅವರು ನ್ಯಾಯಾಲಯದ ಕಲಾಪದ ವೇಳೆ ವಸ್ತ್ರಸಂಹಿತೆಯ ಕಪ್ಪು ಗೌನ್ ಮತ್ತು ನೆಕ್ ಬ್ಯಾಂಡ್ ಇಲ್ಲದೆ ಪಾಲ್ಗೊಂಡಿದ್ದರು.
ವಕೀಲರ ಈ ವರ್ತನೆ ನ್ಯಾಯಾಲಯದ ಘನತೆಗೆ ತಕ್ಕುದಲ್ಲ ಎಂಬುದಾಗಿ ಆದೇಶ ಹಾಳೆಯಲ್ಲಿ ದಾಖಲಿಸಿದ ನ್ಯಾಯಪೀಠ, ನ್ಯಾಯಾಲಯ ಕಲಾಪದ ಘನತೆ ಮತ್ತು ವೃತ್ತಿ ಗೌರವವನ್ನು ಎತ್ತಿಹಿಡಿಯಬೇಕಾಗಿದೆ. ಈ ಪರಂಪರೆಯನ್ನು ಉಲ್ಲಂಘಿಸಿದ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ನ್ಯಾಯವ್ಯವಸ್ಥೆ ನಿಗದಿಪಡಿಸಿದ ವೃತ್ತಿಪರ ಮಾನದಂಡಗಳನ್ನು ಅನುಸರಿಸುವ ಮತ್ತು ವೃತ್ತಿ ಘನತೆಯನ್ನು ಎತ್ತಿಹಿಡಿಯವ ಪ್ರಾಮುಖ್ಯತೆ ವಕೀಲರ ಸಮುದಾಯಕ್ಕೆ ಇದೆ. ವಸ್ತ್ರ ಸಂಹಿತೆ ಈ ನಿಟ್ಟಿನಲ್ಲಿ ಉನ್ನತವಾದ ಮೌಲ್ಯವನ್ನು ಹೊಂದಿದೆ. ವಸ್ತ್ರ ಸಂಹಿತೆ ನಮ್ಮ ಘನತೆಯನ್ನು ಸದಾ ಜ್ಞಾಪಿಸುವಂತೆ ಮಾಡುತ್ತದೆ ಎಂಬುದನ್ನು ಹೈಕೋರ್ಟ್ ನ್ಯಾಯಪೀಠ ಒತ್ತಿ ಹೇಳಿದ್ದು, ಈ ನಿಯಮಗಳನ್ನು ಉಲ್ಲಂಘಿಸಿದ ವಕೀಲರ ವಿರುದ್ಧ ವಕೀಲರ ಪರಿಷತ್ತು ಕ್ರಮ ಕೈಗೊಳ್ಳುವುದನ್ನು ನ್ಯಾಯಾಂಗ ಎದುರುನೋಡುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ: ಕೆ.ಎಸ್. ಸುರೇಂದ್ರನ್ ಪಿಳ್ಳೈ Vs ಮಹಾರಾಷ್ಟ್ರ ಸರ್ಕಾರ ಮತ್ತಿತರರು