ನ್ಯಾಯಾಧೀಶರು ಕಾನೂನಿನ ಚೌಕಟ್ಟು ಮೀರಿ ನಡೆಯಬಾರದು: ಹೈಕೋರ್ಟ್
ನ್ಯಾಯಾಧೀಶರು ಕಾನೂನಿನ ಚೌಕಟ್ಟು ಮೀರಿ ನಡೆಯಬಾರದು: ಹೈಕೋರ್ಟ್
ನಾಯಾಧೀಶರು, ನ್ಯಾಯಮೂರ್ತಿಗಳು ಕಾನೂನಿನ ಚೌಕಟ್ಟು ಮೀರಿ ನಡೆಯಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯದ ಪೀಠಾಸೀನ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದೆ.
ನಾವೆಲ್ಲ ಕೇವಲ ನ್ಯಾಯಮೂರ್ತಿಗಳು, ನ್ಯಾಯಾಧೀಶರು ಮಾತ್ರ. ಇದನ್ನು ನಾವು ಸದಾ ಗಮನದಲ್ಲಿ ಇಟ್ಟುಕೊಂಡಿರಬೇಕು ಎಂದು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ತಮ್ಮ ಆದೇಶದಲ್ಲಿ ಉಲ್ಲೇಖಿಸಿದೆ.
ಅಂಗವಿಕಲ ವ್ಯಕ್ತಿಯೊಬ್ಬರಿಗೆ ನೀಡಲಾಗಿದ್ದ ಮಳಿಗೆಯ ಗುತ್ತಿಗೆ ಅವಧಿ ವಿಸ್ತರಣೆಯನ್ನು ಪ್ರಶ್ನಿಸಿ ಚನ್ನಪಟ್ಟಣ ನಗರಸಭೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಹರಾಜಿನ ಮೂಲಕ ಶಾಪಿಂಗ್ ಮಳಿಗೆಗಳನ್ನು ಗುತ್ತಿಗೆ ನೀಡಲು ರಾಜ್ಯ ಸರ್ಕಾರ 2009ರ ಸೆಪ್ಟಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಶೆ. 80ರಷ್ಟು ಅಂಗವೈಕಲ್ಯ ಹೊಂದಿದ್ದ ಸಿದ್ದರಾಮು ಅವರಿಗೆ ಒಂದು ಮಳಿಗೆಯನ್ನು 12 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಮಧ್ಯೆ ಅವರು ಗುತ್ತಿಗೆ ಅವಧಿಯನ್ನು 20 ವರ್ಷಗಳ ಅವಧಿಗೆ ವಿಸ್ತರಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ ಏಕಸದಸ್ಯ ನ್ಯಾಯಪೀಠ, ಗುತ್ತಿಗೆ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿತ್ತು. ಇದನ್ನು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿ ಮೇಲ್ಮನವಿ ಮಾಡಲಾಗಿತ್ತು.
ಅಂಗವಿಕಲರಿಗೆ ನೀಡಲಾದ ಗುತ್ತಿಗೆಯನ್ನು ಅವರ ನಿಧನದ ನಂತರವೂ ಅನುವಂಶಿಯವಾಗಿ ಪರಿಗಣಿಸುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ. ಹಾಗಾಗಿ, ಪತ್ನಿ ಮತ್ತು ಮಕ್ಕಳು ಯಾವುದೇ ರೀತಿಯಲ್ಲಿ ಅನುವಂಶೀಯವಾಗಿ ಏನನ್ನೂ ಪಡೆಯಲಾಗುವುದಿಲ್ಲ ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ.
ಕಾನೂನಿನ ಅಡಿಯಲ್ಲಿ 12 ವರ್ಷ ಮಾತ್ರವೇ ಗುತ್ತಿಗೆ ನವೀಕರಿಸಲು ಅವಕಾಶವಿದೆ. ಆದರೂ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ಇದ್ದ ನ್ಯಾ. ವಿನೀತ್ ಕೊಠಾಟಿ ಅವರು ಅದನ್ನು 20 ವರ್ಷಕ್ಕೆ ವಿಸ್ತರಿಸಲು ಆದೇಶಿಸಿರುವುದು ಸೂಕ್ತವಲ್ಲ ಎಂದು ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.