ಕಾಲೇಜ್‌ನಲ್ಲಿ ಬುರ್ಖಾ, ಹಿಜಬ್‌ಗೆ ನಿರ್ಬಂಧ: ಕಾಲೇಜು ಆಡಳಿತ ಮಂಡಳಿ ಆದೇಶ ಎತ್ತಿಹಿಡಿದ ಹೈಕೋರ್ಟ್
ಕಾಲೇಜ್‌ನಲ್ಲಿ ಬುರ್ಖಾ, ಹಿಜಬ್‌ಗೆ ನಿರ್ಬಂಧ: ಕಾಲೇಜು ಆಡಳಿತ ಮಂಡಳಿ ಆದೇಶ ಎತ್ತಿಹಿಡಿದ ಹೈಕೋರ್ಟ್
ಕಾಲೇಜಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಬುರ್ಖಾ, ನಖಾಬ್, ಪದಕ, ಟೊಪ್ಪಿಗೆ ಅಥವಾ ಸ್ಟೋಲ್ ರೀತಿಯ ಬಟ್ಟೆ ಧರಿಸುವುದನ್ನು ನಿರ್ಬಂಧಿಸಿದ ಕಾಲೇಜು ಆಡಳಿತ ಮಂಡಳಿ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿ ನಡೆಸುತ್ತಿದ್ದ ಕಾಲೇಜಿನ ಆಡಳಿತ ಮಂಡಳಿ ಆದೇಶವನ್ನು ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠದಲ್ಲಿ ನ್ಯಾ. ಎ.ಎಸ್. ಚಂದೂರ್ಕರ್ ಮತ್ತು ನ್ಯಾ. ರಾಜೇಶ್ ಪಾಟೀಲ್ ಅವರಿದ್ದರು.
ಜೂನ್ 4ರ ಹೊಸ ಶೈಕ್ಷಣಿಕ ವರ್ಷದಿಂದ ವಸ್ತ್ರ ಸಂಹಿತೆ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ವಸ್ತ್ರ ಸಂಹಿತೆಯ ಮಾರ್ಗಸೂಚಿಗಳನ್ನು ಅಧ್ಯಾಪಕರು ಎರಡನೇ ಮತ್ತು ಮೂರನೇ ಪದವಿ ವಿದ್ಯಾರ್ಥಿಗಳಿಗೆ ವಾಟ್ಸ್ಯಾಪ್ ಮೂಲಕ ನೀಡಿದ್ದರು. ಈ ನಿರ್ಧಾರವನ್ನು 9 ವಿದ್ಯಾರ್ಥಿಗಳು ಪ್ರಶ್ನಿಸಿದ್ದರು.
ನಖಾಬ್ ಮತ್ತು ಹಿಜಬ್ ಅರ್ಜಿದಾರರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ತರಗತಿಯಲ್ಲಿ ನಖಾಬ್ ಮತ್ತು ಹಿಜಬ್ ಧರಿಸುವುದನ್ನು ಮುಂದುವರಿಸುವುದು ಅವರ ಇಚ್ಚೆ. ಇದು ಆಯ್ಕೆ ಮತ್ತು ಖಾಸಗಿತನದ ಹಕ್ಕಿನ ಭಾಗ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಆದೇಶ ಹೊರಡಿಸಿದ ಶಿಕ್ಷಣ ಸಂಸ್ಥೆ ಸರ್ಕಾರದ ಅನುದಾನ ಪಡೆದಿರುತ್ತದೆ. ಕಾಲೇಜಿನ ಮಾರ್ಗಸೂಚಿಗಳು ಕಾನೂನುಬಾಹಿರವಾಗಿದ್ದು, ನಿರಂಕುಶ ಮತ್ತು ಅಸಮಂಜಸವಾಗಿದೆ ಎಂದು ಅವರು ವಾದಿಸಿದ್ದರು.
ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ್ ಅಂತೂರ್ಕರ್, ಸಂವಿಧಾನದ 25ನೇ ವಿಧಿಯಡಿ ಸಿಖ್ ಪೇಟದಂತಹ ಕೆಲವು ಉಡುಪುಗಳನ್ನು ಧರಿಸುವುದು ಧಾರ್ಮಿಕ ಮೂಲಭೂತ ಹಕ್ಕಿಗೆ ಒಳಪಟ್ಟಿದೆ. ಈ ರೀತಿ ಸಾಬೀತಾಗದ ವಿನಃ ಎಲ್ಲರಿಗೂ ವಸ್ತ್ರ ಸಂಹಿತೆ ಅನ್ವಯಿಸುತ್ತದೆ ಎಂದು ವಾದಿಸಿದರು.
ಯಾರಾದರೂ ಸಂಪೂರ್ಣ ಕೇಸರಿ ವಸ್ತ್ರ ಧರಿಸಿ ಕಾಲೇಜಿಗೆ ಬಂದರೆ, ಆಡಳಿತ ಆ ವಸ್ತ್ರವನ್ನೂ ವಿರೋಧಿಸುತ್ತದೆ ಎಂದು ವಾದಿಸಿದರು.