"ಕೇರಳ" ಹೆಸರು ಬದಲಾವಣೆ: ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ
Monday, June 24, 2024
"ಕೇರಳ" ಹೆಸರು ಬದಲಾವಣೆ: ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ
"ಕೇರಳ" ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾವಣೆ ಮಾಡಲು ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯವನ್ನು ಸದನದ ಎಲ್ಲ ಸದಸ್ಯರು ಬೆಂಬಲಿಸಿದರು.
ಈ ರೀತಿಯ ನಿರ್ಣಯ ಅಂಗೀಕರಿಸುವುದು ಇದು ಎರಡನೇ ಬಾರಿ. ಮೊದಲ ಬಾರಿ ಕಳುಹಿಸಿದ್ದ ನಿರ್ಣಯವನ್ನು ಕೇಂದ್ರ ಸರ್ಕಾರ ವಾಪಸ್ ಮಾಡಿತ್ತು. ಕೇಂದ್ರ ಗೃಹ ಸಚಿವಾಲಯವು ನಿರ್ಣಯವನ್ನು ಪರಿಶೀಲಿಸಿ ತಾಂತ್ರಿಕ ಬದಲಾವಣೆ ಮಾಡುವಂತೆ ಸಲಹೆ ಮಾಡಿತ್ತು.
ಹೆಸರು ಬದಲಿಸಬೇಕು ಎಂದು ಕೋರುವ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಇಂಗ್ಲಿಷ್ ಸೇರಿ ಸಂವಿಧಾನದ 8ನೇ ಪರಿಚ್ಚೇದದಲ್ಲಿ ಉಲ್ಲೇಖಿಸಿರುವ ಎಲ್ಲ ಭಾಷೆಗಳಲ್ಲೂ ಕೇರಳಂ ಎಂದೇ ಉಲ್ಲೇಖಿಸಬೇಕು ಎಂದು ಕೋರಿದರು.
ಈ ನಿರ್ಣಯದ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಬೇಕು ಎಂದು ಕೇರಳ ವಿಧಾನಸಭೆ ಕೇಂದ್ರ ಸರ್ಕಾರವನ್ನು ಕೋರಿಕೊಂಡಿದೆ.