ಅರೆಕಾಲಿಕ ಉಪನ್ಯಾಸಕಿಗೆ ಪೂರ್ಣಕಾಲಿಕ ನೆಲೆಯಲ್ಲಿ ನೇಮಕ: ಕಾಲೇಜು ಆಡಳಿತ ಮಂಡಳಿಗೆ ತಾಕೀತು ಮಾಡಿದ ಕರ್ನಾಟಕ ಹೈಕೋರ್ಟ್
ಅರೆಕಾಲಿಕ ಉಪನ್ಯಾಸಕಿಗೆ ಪೂರ್ಣಕಾಲಿಕ ನೆಲೆಯಲ್ಲಿ ನೇಮಕ: ಕಾಲೇಜು ಆಡಳಿತ ಮಂಡಳಿಗೆ ತಾಕೀತು ಮಾಡಿದ ಕರ್ನಾಟಕ ಹೈಕೋರ್ಟ್
ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಎಚ್.ಎಸ್. ವಿಜಯಲಕ್ಷ್ಮೀ ಅವರನ್ನು ಪೂರ್ಣ ಪ್ರಮಾಣದ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಶಿಕ್ಷಣ ಇಲಾಖೆ ಮತ್ತು ಕಾಲೇಜಿನ ಆಡಳಿತ ಮಂಡಳಿಗೆ ಆದೇಶ ಹೊರಡಿಸಿದೆ.
ಮೂರು ತಿಂಗಳಲ್ಲಿ ಈ ಆದೇಶ ಜಾರಿಗೊಳಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಎಚ್.ಎಸ್. ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ. ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಶಿವಶಂಕರ್ ಭಟ್ ಅವರ ನಿವೃತ್ತಿಯಿಂದ ಹಿಂದಿ ಭಾಷೆಯ ಉಪನ್ಯಾಸಕ ಹುದ್ದೆ ಖಾಲಿ ಇತ್ತು. ಈ ಹುದ್ದೆಗೆ 1996ರ ಜೂನ್ 1ರಂದು ಅರೆಕಾಲಿಕ ಉಪನ್ಯಾಸಕಿಯಾಗಿ ನೇಮಕಗೊಂಡು ವಾರದಲ್ಲಿ 16 ಗಂಟೆಗಳ ಕಾಲ ಪಾಠ ಮಾಡುತ್ತಿದ್ದರು.
ಆದರೆ, ಏಕಸದಸ್ಯ ನ್ಯಾಯಪೀಠ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕಾಲೇಜು ಶಿಕ್ಷಣ) ನಿಯಮ 2003ನ್ನು ಸರಿಯಾಗಿ ಗ್ರಹಿಸದೆ ಅರ್ಜಿದಾರರನ್ನು ಪೂರ್ಣಕಾಲಿಕ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ ಎಂದು ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನಿಯಮ 3ರಂತೆ ಸುದೀರ್ಘ ಅವಧಿಯ ವರೆಗೆ ಅರ್ಜಿದಾರರು ಸಲ್ಲಿಸಿರುವ ಸೇವೆಯನ್ನು ಅನುದಾನಿತ ಸಂಸ್ಥೇಗಳಲ್ಲಿ ಬಳಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.