ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ಶಂಕೆ: ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ಶಂಕೆ: ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ
ಇತ್ತೀಚೆಗೆ ಹೊರಬಿದ್ದ ಫಲಿತಾಂಶ ನೋಡಿದರೆ ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ನೀಟ್ ಪರೀಕ್ಷೆ ಬರೆದಿರುವ 24 ಲಕ್ಷ ಯುವಜನರು, ಅವರ ಪೋಷಕರಲ್ಲಿ ಮೂಡಿರುವ ಆತಂಕಕ್ಕೆ ಸಮಜಾಯಿಷಿ ನೀಡಬೇಕಾಗಿದೆ.
ನೀಟ್ ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ 67 ಅಭ್ಯರ್ಥಿಗಳಿಗೆ 720ರಲ್ಲಿ 720 ಅಂಕ ದೊರೆತಿದೆ. ಅಂದರೆ, ಶೇಕಡಾ ನೂರರಷ್ಟು ಅಂಕ ಬಂದಿದೆ. ಈ ಹಿಂದೆ ಬಂದ ಟಾಪರ್‌ಗಳ ಸಂಖ್ಯೆ ಎಷ್ಟು..? ಇದನ್ನು ಪರಿಶೀಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ವಾಸನೆ ಬಡಿಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇದೆ. ತಪ್ಪು ಉತ್ತರ ಬರೆದರೆ ಋಣಾತ್ಮಕ ಅಂಕ ನೀಡಲಾಗುವುದು. 2019ರಿಂದ 2022ರ ವರೆಗೆ ಒಂದೋ ಎರಡೋ ಟಾಪರ್‌ಗಳು ಪೂರ್ಣ ಅಂಕ ಪಡೆದಿದ್ದಾರೆ. ಆಧರೆ, ಈ ಬಾರಿ 67 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ ಎಂದರೆ ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೂ.. ಎಂಬುದನ್ನು ಮೋದಿ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಅವರು ಮಾರ್ಮಿಕವಾಗಿ ನುಡಿದರು.