ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಅಧಿಕಾರ ವ್ಯಾಪ್ತಿಯಲ್ಲಿ ಬದಲಾವಣೆ
ರಾಜ್ಯದ ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆ 2023ಕ್ಕೆ ರಾಜ್ಯಪಾಲರ ಅಂಕಿತ. ಅಧಿಕಾರ ವ್ಯಾಪ್ತಿಯಲ್ಲಿ ಬದಲಾವಣೆ
ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ತರಲು ದಿನಾಂಕ 12.12.2023 ರಂದು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023 ನ್ನು ಮಂಡಿಸಿ ಅಂಗೀಕರಿಸಲಾಯಿತು.ಈ ತಿದ್ದುಪಡಿಗೆ ರಾಜ್ಯಪಾಲರು ದಿನಾಂಕ 20.3.2024ರಂದು ಅನುಮತಿ ನೀಡಿರುತ್ತಾರೆ.
ದಿನಾಂಕ 19.6.2024 ರ ರಾಜ್ಯ ಪತ್ರದಲ್ಲಿ ಈ ತಿದ್ದುಪಡಿ ಪ್ರಕಟವಾಗಿದ್ದು ನಿಯಮಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.
ತಳಹಂತದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ವಿತ್ತೀಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಅಧಿಕ ಪ್ರಕರಣಗಳ ಹೊರೆಯನ್ನು ತಗ್ಗಿಸಲು ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ
ಮೊದಲನೇ ತಿದ್ದುಪಡಿ
1. ವಿತ್ತೀಯ ಅಧಿಕಾರ ವ್ಯಾಪ್ತಿಯ ಕುರಿತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 17ರ ಪ್ರಕಾರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ 5 ಲಕ್ಷಗಳಿಗೆ ಮೀರದ ವಿಷಯ ಮೊಬಲಗು ಅಥವಾ ಎಲ್ಲಾ ಮೂಲದಾವೆಗಳಿಗೆ ಹಾಗೂ ವ್ಯವಹರಣೆಗಳಿಗೆ ಅಧಿಕಾರ ವ್ಯಾಪ್ತಿ ಪ್ರಾಪ್ತವಾಗಿತ್ತು. ಪ್ರಸ್ತುತ ತಿದ್ದುಪಡಿಯ ಮೂಲಕ 5 ಲಕ್ಷಗಳಿಗೆ ಬದಲಾಗಿ 15 ಲಕ್ಷಗಳಿಗೆ ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ದಿನಾಂಕ 19.6.2024 ರಿಂದ 15 ಲಕ್ಷದೊಳಗಿನ ಮೌಲ್ಯದ ದಾವೆಗಳನ್ನು ತಳಹಂತದ ಸಿವಿಲ್ ನ್ಯಾಯಾಲಯದಲ್ಲಿ (ಹಿಂದಿನ ಹೆಸರು ಮುನ್ಸೀಫ್ ನ್ಯಾಯಾಲಯ) ದಾಖಲಿಸತಕ್ಕದ್ದಾಗಿದೆ.
ಎರಡನೆಯ ತಿದ್ದುಪಡಿ
ಮೇಲ್ಮನವಿಗೆ ಸಂಬಂಧಪಟ್ಟಂತೆ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 19ರ ಪ್ರಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಮಾಡಿದ ಡಿಕ್ರಿಗಳು ಮತ್ತು ಆದೇಶಕ್ಕೆ ಸಂಬಂಧಿಸಿದಂತೆ ಮೂಲದಾವೆ ಅಥವಾ ವ್ಯವಹರಣೆಯ ವಸ್ತು, ವಿಷಯದ ಮೊಬಲಗು 10 ಲಕ್ಷ ಗಳಿಗಿಂತ ಕಡಿಮೆ ಇದ್ದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು.10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯವುಳ್ಳ ದಾವೆಗೆ ಸಂಬಂಧಪಟ್ಟಂತೆ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯು ಹಿರಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ಡಿಕ್ರಿಗಳು ಮತ್ತು ಆದೇಶಗಳ ವಿರುದ್ಧ ಕಾನೂನಿನ ಮೂಲಕ ಮೇಲ್ಮನವಿಗೆ ಅವಕಾಶವಿದ್ದಲ್ಲಿ ಅಂಥ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ.
ತಿದ್ದುಪಡಿಯ ಪರಿಣಾಮಗಳು
ತಿದ್ದುಪಡಿಯಿಂದ ತಳಹಂತದ ಸಿವಿಲ್ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯಗಳ ಕೆಲಸದ ಹೊರೆ ಹೆಚ್ಚಾಗಲಿದೆ.
15 ಲಕ್ಷಕ್ಕಿಂತಲೂ ಹೆಚ್ಚಿನ ಅನಿಯಮಿತ ಮೌಲ್ಯದ ದಾವೆಗಳನ್ನು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸತಕ್ಕದ್ದಾಗಿದೆ. ಸಿವಿಲ್ ನ್ಯಾಯಾಲಯಗಳ ಡಿಕ್ರಿ ಅಥವಾ ಆದೇಶದ ವಿರುದ್ಧ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಈ ಹಿಂದಿನಂತೆ ಸಲ್ಲಿಸತಕ್ಕದ್ದಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ