ಡೀಪ್ ಫೇಕ್ ಆತಂಕ: ಕೌಟುಂಬಿಕ ಪ್ರಕರಣದಲ್ಲಿ ವ್ಯಭಿಚಾರದ ಫೋಟೋ ಋತುವಾತಿಗೆ ತಾಕೀತು ಮಾಡಿದ ಹೈಕೋರ್ಟ್
ಡೀಪ್ ಫೇಕ್ ಆತಂಕ: ಕೌಟುಂಬಿಕ ಪ್ರಕರಣದಲ್ಲಿ ವ್ಯಭಿಚಾರದ ಫೋಟೋ ಋತುವಾತಿಗೆ ತಾಕೀತು ಮಾಡಿದ ಹೈಕೋರ್ಟ್
ತನ್ನ ಪತ್ನಿ ವ್ಯಭಿಚಾರದಲ್ಲಿ ತೊಡಗಿದ್ದಾರೆ ಎಂದು ವಾದಿಸಿರುವ ಅರ್ಜಿದಾರ ಪತಿಗೆ ತಾನು ನ್ಯಾಯಾಲಯದ ಮುಂದಿಟ್ಟಿರುವ ಫೋಟೋಗಳನ್ನು ಋಜುವಾತು ಮಾಡುವಂತೆ ದೆಹಲಿ ಹೈಕೋರ್ಟ್ ತಾಕೀತು ಮಾಡಿದೆ.
ನಾವು ಡೀಪ್ ಫೇಕ್ ಯುಗದಲ್ಲಿ ಜೀವಿಸುತ್ತಿದ್ದೇವೆ. ಆರೋಪ ಮಾಡಿ ಹಾಜರುಪಡಿಸಲಾದ ಫೋಟೋಗಳನ್ನು ನಾವು ಗಮನಿಸಿದ್ದೇವೆ. ಆದರೆ, ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿ ಅರ್ಜಿದಾರರ ಪತ್ನಿಯೇ ಎಂಬುದು ಸ್ಪಷ್ಟವಾಗಿಲ್ಲ. ಇದು ಅರ್ಜಿದಾರರು ಕೌಟುಂಬಿಕ ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕಾದ ಅಂಶವಾಗಿದೆ ಎಂದು ನ್ಯಾಯಪೀಠ ಅರ್ಜಿದಾರರಿಗೆ ಹೇಳಿದೆ.
ದೆಹಲಿ ಹೈಕೋರ್ಟ್‌ನ ನ್ಯಾ. ರಾಜೀವ್ ಶಕ್ದೇರ್ ಮತ್ತು ನ್ಯಾ. ಅಮಿತ್ ಬನ್ಸಾಲ್ ಅವರಿದ್ದ ನ್ಯಾಯಪೀಠ ಈ ಟಿಪ್ಪಣಿ ಮಾಡಿದ್ದು, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತು.
ಪತ್ನಿ ಮತ್ತು ಮಗುವಿಗೆ ರೂ. 75,000/- ಜೀವನಾಂಶ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯ ಪತಿಗೆ ಆದೇಶ ನೀಡಿತ್ತು. ವಾಸ್ತುಶಿಲ್ಪಿಯಾಗಿರುವ ಪತಿ ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೇಲ್ಮನವಿದಾರರು ತಮ್ಮ ಪತ್ನಿ ವ್ಯಭಿಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಕೆಲ ಭಾವಚಿತ್ರಗಳನ್ನೂ ಹಾಜರುಪಡಿಸಲಾಗಿತ್ತು. ಆದರೆ, ಕೌಟುಂಬಿಕ ನ್ಯಾಯಾಲಯದ ಮುಂದೆ ಈ ವಿಷಯವನ್ನು ಮಂಡಿಸಲಾಗಿತ್ತು ಎಂದು ಸೂಚಿಸುವ ಯಾವ ಅಂಶವನ್ನೂ ಪ್ರಸ್ತಾಪಿಸಲಾಗಿಲ್ಲ ಎಂದು ನ್ಯಾಯಪೀಠ ಗಮನಿಸಿತು.