ಜೀವ ಬೆದರಿಕೆ ವಿರುದ್ಧ ದೂರು ಸ್ವೀಕಾರಕ್ಕೆ ನಿರ್ಲಕ್ಷ್ಯ: ನಾಲ್ವರ ಆತ್ಮಹತ್ಯೆ ಯತ್ನಕ್ಕೆ ಕಾರಣರಾದ ಮೂವರು ಪೊಲೀಸರು ಅಮಾನತು
ಜೀವ ಬೆದರಿಕೆ ವಿರುದ್ಧ ದೂರು ಸ್ವೀಕಾರಕ್ಕೆ ನಿರ್ಲಕ್ಷ್ಯ: ನಾಲ್ವರ ಆತ್ಮಹತ್ಯೆ ಯತ್ನಕ್ಕೆ ಕಾರಣರಾದ ಮೂವರು ಪೊಲೀಸರು ಅಮಾನತು
ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪೊಲೀಸರು ದೂರು ಸ್ವೀಕಾರಕ್ಕೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಮೃತಪಟ್ಟಿದ್ಧಾರೆ.
ಈ ಘಟನೆ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಮೂವರು ಪೊಲೀಸರು ಅಮಾನತು ಮಾಡಲಾಗಿದೆ.
ಕೆ.ಆರ್. ನಗರ ತಾಲೂಕಿನ ಚಂದಗಾಲ ಗ್ರಾಮದ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಮೂವರ ಪೈಕಿ ಇಬ್ಬರು ಚೇತರಿಕೆ ಕಂಡಿದ್ದು, ಒಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದೆ. ಇದಕ್ಕೂ ಮುನ್ನ ಈ ಕುಟುಂಬ ಪೊಲೀಸ್ ಠಾಣೆಗೆ ಬಂದು ತಮಗೆ ಕೊಲೆ ಬೆದರಿಕೆ ಇದೆ ಎಂದು ದೂರು ನೀಡಿದರು.
ಅದನ್ನು ಸ್ವೀಕರಿಸದೆ ನಿರ್ಲಕ್ಷ್ಯ ತೋರಿದ ಕೆ.ಆರ್. ನಗರ ಠಾಣೆಯ ಸಿಪಿಐ ಸಂತೋಷ್, ಎಸ್‌ಐ ಗಿರೀಶ್, ಮುಖ್ಯ ಪೇದೆ ರಾಘವೇಂದ್ರ ಅವರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತು ಮಾಡಲಾಗಿದೆ.
ಮೃತ ಮಹಾದೇವ ನಾಯಕ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತಂದ ಸಂದರ್ಭದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆ ಸಮೀಪದ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್. ನಗರ ಶಾಸಕ ಡಿ. ರವಿಶಂಕರ್ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.