-->
ಶಿಸ್ತು ಪ್ರಾಧಿಕಾರ ವಿಧಿಸಿದ ಶಿಕ್ಷೆ ಮಾರ್ಪಡಿಸುವ ಅಧಿಕಾರ ಯಾರಿಗಿದೆ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಶಿಸ್ತು ಪ್ರಾಧಿಕಾರ ವಿಧಿಸಿದ ಶಿಕ್ಷೆ ಮಾರ್ಪಡಿಸುವ ಅಧಿಕಾರ ಯಾರಿಗಿದೆ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಶಿಸ್ತು ಪ್ರಾಧಿಕಾರ ವಿಧಿಸಿದ ಶಿಕ್ಷೆ ಮಾರ್ಪಡಿಸುವ ಅಧಿಕಾರ ಯಾರಿಗಿದೆ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು






ಶಿಸ್ತು ಪ್ರಾಧಿಕಾರ ವಿಧಿಸಿದ ಶಿಕ್ಷೆಯನ್ನು ಮಾರ್ಪಡಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು


ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಮತ್ತು ಶಿಕ್ಷೆಯ ಸ್ವರೂಪವನ್ನು ನಿರ್ಧರಿಸುವುದು ಶಿಸ್ತು ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದೆ. ಶಿಸ್ತು ಪ್ರಾಧಿಕಾರವು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಪರಿಗಣಿಸದೆ ಗಂಭೀರ ಪ್ರಮಾದ ಎಸಗಿದ ಪ್ರಕರಣಗಳನ್ನು ಹೊರತುಪಡಿಸಿ ನ್ಯಾಯಾಲಯಗಳು ಶಿಸ್ತು ಪ್ರಾಧಿಕಾರದ ಕಾರ್ಯವನ್ನು ನಿರ್ವಹಿಸುವಂತಿಲ್ಲ ಹಾಗೂ ಶಿಸ್ತು ಪ್ರಾಧಿಕಾರ ವಿಧಿಸಿದ ಶಿಕ್ಷೆಯನ್ನು ಮಾರ್ಪಡಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂಬುದಾಗಿ ಮಾನ್ಯ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಲೋಕ್ ಆರಾಧೆ ಮತ್ತು ಶ್ರೀ ಹೇಮಂತ ಚಂದನ್ ಗೌಡರ್ ಇವರನ್ನು ಒಳಗೊಂಡ ವಿಭಾಗೀಯ ಪೀಠವು ಕೆ. ಸಿಪ್ಪೇಗೌಡ ವಿರುದ್ಧ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ದಿನಾಂಕ 17.8.2021 ರಂದು ಮಹತ್ವದ ತೀರ್ಪು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ರಿಟ್ ಮೇಲ್ಮನವಿ ಸಂಖ್ಯೆ 4203/2011 ರಲ್ಲಿ ಮೇಲ್ಮನವಿದಾರರಾಗಿರುವ ಕೆ. ಸಿಪ್ಪೇಗೌಡ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಕೋರ್ಟ್ ಆಫೀಸರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 1995 ರಲ್ಲಿ ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. 2002 ರಲ್ಲಿ ಸಂಘದ ರಾಜ್ಯಾಧ್ಯಕ್ಷರಾಗಿ ಪುನರ್ ಆಯ್ಕೆಗೊಂಡರು. ಸುಮಾರು 6 ಲಕ್ಷ ಸದಸ್ಯರನ್ನು ಹಾಗೂ 182 ಶಾಖೆಗಳನ್ನು ಸಂಘವು ಹೊಂದಿತ್ತು.


ರಾಜ್ಯಾಧ್ಯಕ್ಷರಾಗಿ ವಿವಿಧ ಇಲಾಖೆಗಳ ಸರಕಾರಿ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಗುರುತರ ಜವಾಬ್ದಾರಿಯನ್ನು ಮೇಲ್ಮನವಿದಾರ ಕೆ. ಸಿಪ್ಪೇಗೌಡ ಅವರು ಹೊಂದಿದ್ದರು. ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯ ರಾಗಿರುವುದರಿಂದ ಕಚೇರಿಯಲ್ಲಿ ಅವರ ಹಾಜರಾತಿ ಕ್ರಮಬದ್ಧವಾಗಿರಲಿಲ್ಲ. ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ ಬಳಿಕ ಅವರು ತನ್ನ ಕಚೇರಿ ಕರ್ತವ್ಯವನ್ನು ನಿರ್ವಹಿಸುವ ಬದಲು ಕಚೇರಿಯಿಂದ ನಿರ್ಗಮಿಸುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಗೈರು ಹಾಜರಿ ಎಂದು ಹಾಜರಿ ಪುಸ್ತಕದಲ್ಲಿ ನಮೂದಿಸಿದ್ದರೂ ಅದರ ಮೇಲೆ ಸಹಿ ಮಾಡುತ್ತಿದ್ದರು. ಮೇಲ್ಮನವಿದಾರರ ಈ ವರ್ತನೆಯನ್ನು ಅವರ ಮೇಲಾಧಿಕಾರಿಯಾಗಿದ್ದ ವಿಲೇಖನಾಧಿಕಾರಿ (ನ್ಯಾಯಾಂಗ) ಇವರು ಪ್ರಶ್ನಿಸಿದಾಗ ಸಿಪ್ಪೇಗೌಡ ಅವರು ಮೇಲಾಧಿಕಾರಿಯನ್ನು ದುರುಗುಟ್ಟಿ ನೋಡಿ ತನಗೆ ಸಂಘದ ಕಾರ್ಯ ಚಟುವಟಿಕೆಗಳಿವೆ. ಕಚೇರಿ ಕೆಲಸದಿಂದ ವಿನಾಯಿತಿ ಇದೆ ಎಂದು ನುಡಿದು ಕಚೇರಿ ಕರ್ತವ್ಯವನ್ನು ನಿರ್ವಹಿಸಲು ನಿರಾಕರಿಸುತ್ತಿದ್ದರು.


ಕೆ. ಸಿಪ್ಪೇಗೌಡರ ಈ ವರ್ತನೆಯನ್ನು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಅವಗಾಹನೆಗೆ ತರಲಾಗಿ ಅವರನ್ನು ಮುಖ್ಯ ನ್ಯಾಯಾಧೀಶರು ತಮ್ಮ ನ್ಯಾಯಾಲಯದ ಸಹಾಯಕ ಕೋರ್ಟ್ ಆಫೀಸರ್ ಹುದ್ದೆಗೆ ನಿಯುಕ್ತಿಗೊಳಿಸಿದರು. ಆದರೆ ಸದರಿ ಆದೇಶವನ್ನು ಪಾಲಿಸುವ ಬದಲು ಸಿಪ್ಪೇಗೌಡ ಅವರು ದಿನಾಂಕ 18.12.2004 ರಿಂದ 15.2.2005 ರ ವರೆಗೆ ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದರು.


ಮಾನ್ಯ ಮುಖ್ಯ ನ್ಯಾಯಾಧೀಶರ ಆದೇಶವನ್ನು ಸಿಪ್ಪೇಗೌಡರು ಉದ್ದೇಶಪೂರ್ವಕವಾಗಿ ಕಡೆಗಣಿಸಿ ಅವಿಧೇಯತನ ತೋರಿಸಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದ ಶಿಸ್ತು ಪಾಲನಾಧಿಕಾರಿಯವರಾದ ಮಾನ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸಿಪ್ಪೇಗೌಡ ರನ್ನು ಸೇವೆಯಿಂದ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಿದರು.


ಇಲಾಖಾ ವಿಚಾರಣೆಯಲ್ಲಿ ತಪ್ಪಿತಸ್ಥ ಅಧಿಕಾರಿ ಸಿಪ್ಪೇಗೌಡರ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.


ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಕಚೇರಿ ಕರ್ತವ್ಯದ ಅವಧಿಯಲ್ಲಿ ಕಚೇರಿಯಿಂದ ತೆರಳಲು ದಿನಾಂಕ 16.8.1991ರಲ್ಲಿ ಹೈಕೋರ್ಟಿನ ಸಹಾಯಕ ವಿಲೇಖನಾಧಿಕಾರಿಯವರು ಜ್ಞಾಪನಾ ಪತ್ರದ ಮೂಲಕ ತಮಗೆ ಅನುಮತಿ ನೀಡಿರುತ್ತಾರೆ. ವೈದ್ಯಕೀಯ ನೆಲೆಯಲ್ಲಿ ರಜೆಯನ್ನು ಕೋರಿರುವುದರಿಂದ ಕಚೇರಿ ಕರ್ತವ್ಯಕ್ಕೆ ಗೈರುಹಾಜರಿಯು ಯಾವುದೇ ದುರ್ವರ್ತನೆ ಆಗುವುದಿಲ್ಲ. ತನ್ನ ಕಾರ್ಯನಿರ್ವಹಣಾ ವರದಿಯಲ್ಲಿ ಹಾಜರಾತಿ, ನಡತೆ ಹಾಗೂ ಕರ್ತವ್ಯ ನಿಷ್ಠೆಯ ಬಗ್ಗೆ ಯಾವುದೇ ಪ್ರತಿಕೂಲ ಷರಾ ಇಲ್ಲ. ಆದುದರಿಂದ ತಮ್ಮ ವಿರುದ್ಧ ಹೊರಿಸಲಾದ ಆರೋಪಗಳಿಂದ ದೋಷ ಮುಕ್ತರನ್ನಾಗಿ ಮಾಡಬೇಕಾಗಿ ಕೋರಿದರು.


ಹೈಕೋರ್ಟಿನ ಪರವಾಗಿ ಮಂಡನಾಧಿಕಾರಿಯವರು ಈ ಕೆಳಗಿನಂತೆ ತಮ್ಮ ವಾದ ಮಂಡಿಸಿದರು. ಕಚೇರಿ ಕರ್ತವ್ಯದ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸರಕಾರಿ ನೌಕರನಿಗೆ ಅವಕಾಶವಿಲ್ಲ. ಕಚೇರಿ ಕೆಲಸ ಮುಗಿದ ಬಳಿಕ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತಕ್ಕದ್ದು. ಕಳೆದ ಹಲವಾರು ವರ್ಷಗಳಿಂದ ತಪ್ಪಿತಸ್ಥ ಅಧಿಕಾರಿ ನಿರಂತರವಾಗಿ ಕಚೇರಿ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಮೇಲಧಿಕಾರಿಗಳ ನಿರ್ದೇಶನಗಳನ್ನು ಉಲ್ಲಂಘಿಸಿರುತ್ತಾರೆ. ತನಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದು ಮಾನ್ಯ ಮುಖ್ಯ ನ್ಯಾಯಾಧೀಶರ ಆದೇಶಕ್ಕೆ ಅವಿಧೇಯತನ ತೋರಿಸಿದ್ದಾರೆ. ಆದುದರಿಂದ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ವಿಚಾರಣಾಧಿಕಾರಿಯವರು ತಪ್ಪಿತಸ್ಥ ಅಧಿಕಾರಿ ಸಿಪ್ಪೇಗೌಡರ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂಬ ನಿಷ್ಕರ್ಷೆಗೆ ಬಂದು ತಮ್ಮ ವರದಿಯನ್ನು ಮಾನ್ಯ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಿದರು. ಸದರಿ ವರದಿಯ ಆಧಾರದಲ್ಲಿ ಮಾನ್ಯ ಮುಖ್ಯ ನ್ಯಾಯಾಧೀಶರು ಸಿಪ್ಪೇಗೌಡರನ್ನು ಸೇವೆಯಿಂದ ವಜಾಗೊಳಿಸುವ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.


ಮಾನ್ಯ ಮುಖ್ಯ ನ್ಯಾಯಾಧೀಶರ ಆದೇಶದಿಂದ ಬಾಧಿತರಾದ ಸಿಪ್ಪೇಗೌಡರು ಶಿಸ್ತು ಪ್ರಾಧಿಕಾರ ಹೊರಡಿಸಿದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಂಖ್ಯೆ 26158/2005 ಅನ್ನು ದಾಖಲಿಸಿದರು. ಸದರಿ ಪ್ರಕರಣದಲ್ಲಿ ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಆನಂದ ಬೈರಾರೆಡ್ಡಿ ಅವರಿದ್ದ ನ್ಯಾಯ ಪೀಠವು ದಿನಾಂಕ 31.3.2011ರಂದು ಆದೇಶ ಹೊರಡಿಸಿತು. ಶಿಸ್ತು ಪ್ರಾಧಿಕಾರವು ವಿಧಿಸಿದ ಶಿಕ್ಷೆಯು ಸಮರ್ಪಕವಾಗಿಲ್ಲ ಎಂಬ ನಿಷ್ಕರ್ಷೆಗೆ ಬಂದ ನ್ಯಾಯಪೀಠವು ಸಿಪ್ಪೇಗೌಡರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಕಡ್ಡಾಯ ನಿವೃತ್ತಿಯ ಶಿಕ್ಷೆಯನ್ನು ವಿಧಿಸುವಂತೆ ಶಿಸ್ತು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು.


ಸದರಿ ಆದೇಶದಿಂದ ಬಾಧಿತರಾದ ಉಭಯ ಪಕ್ಷಕಾರರು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಮೇಲ್ಮನವಿಗಳನ್ನು ದಾಖಲಿಸಿದರು.


ಶಿಸ್ತು ಪ್ರಾಧಿಕಾರದ ಪರವಾಗಿ ಈ ಕೆಳಗಿನಂತೆ ವಾದ ಮಂಡಿಸಲಾಯಿತು. ಕಚೇರಿ ಕರ್ತವ್ಯಕ್ಕೆ ನಿರಂತರವಾಗಿ ಗೈರುಹಾಜರಾಗಿ ಮೇಲಾಧಿಕಾರಿಗಳ ಆದೇಶವನ್ನು ನಿರ್ಲಕ್ಷಿಸಿ, ತನಗೆ ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯಕೀಯ ನೆಲೆಯಲ್ಲಿ ಗಳಿಕೆ ರಜೆ ಕೋರಿ ಅರ್ಜಿ ಸಲ್ಲಿಸಿದ ಸಿಪ್ಪೇಗೌಡರು ಸರಕಾರಿ ನೌಕರರಿಗೆ ತಕ್ಕುದಲ್ಲದ ವರ್ತನೆಯನ್ನು ತೋರಿಸಿರುವುದು ನಿಯಮಾನುಸಾರ ಸಮರ್ಪಕವಾಗಿ ನಡೆಸಿದ ವಿಚಾರಣೆಯಲ್ಲಿ ಸಾಬೀತಾಗಿದ್ದು ಶಿಸ್ತುಪಾಲನಾ ಅಧಿಕಾರಿಯವರು ತಪ್ಪಿತಸ್ಥ ಅಧಿಕಾರಿಗೆ ನೀಡಿರುವ ಶಿಕ್ಷೆಯು ಸಮಂಜಸವಾಗಿದೆ. ಸದರಿ ಶಿಕ್ಷೆಯನ್ನು ಮಾರ್ಪಡಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ. ಏಕಸದಸ್ಯ ನ್ಯಾಯಪೀಠವು ತನ್ನ ಆದೇಶದಲ್ಲಿ ಯಾವ ಕಾರಣಕ್ಕೆ ತಪ್ಪಿತಸ್ಥ ಅಧಿಕಾರಿ ವಿರುದ್ಧ ಶಿಸ್ತು ಪ್ರಾಧಿಕಾರವು ನೀಡಿದ ಶಿಕ್ಷೆಯನ್ನು ಮಾರ್ಪಡಿಸಲಾಗಿದೆ ಎಂಬುದರ ಬಗ್ಗೆ ಚರ್ಚಿಸಿಲ್ಲ. ಆದುದರಿಂದ ಏಕ ಸದಸ್ಯ ನ್ಯಾಯ ಪೀಠ ಹೊರಡಿಸಿದ ಆದೇಶವನ್ನು ರದ್ದುಪಡಿಸುವಂತೆ ಕೋರಿದರು.


ತಪ್ಪಿತಸ್ಥ ಅಧಿಕಾರಿ ಸಿಪ್ಪೇಗೌಡರ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು. ತಪ್ಪಿತಸ್ಥ ಅಧಿಕಾರಿ ತನ್ನ 32 ವರ್ಷಗಳ ಸೇವಾ ಜೀವನದಲ್ಲಿ ಯಾವುದೇ ದುರ್ವರ್ತನೆ ತೋರಿಲ್ಲ. ಅವರ ಕಾರ್ಯ ನಿರ್ವಹಣಾ ವರದಿಯಲ್ಲಿ ಯಾವುದೇ ಪ್ರತಿಕೂಲ ಷರಾ ಇಲ್ಲ. ನೌಕರರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಇಲಾಖಾ ವತಿಯಿಂದ ಅವರಿಗೆ ಅನುಮತಿ ನೀಡಲಾಗಿದೆ. ಸೇವೆಯಿಂದ ವಜಾಗೊಳಿಸುವ ದಂಡನೆಯು ಅವರ ವಿರುದ್ಧ ಹೊರಿಸಲಾದ ಆರೋಪಗಳಿಗೆ ನೀಡುವ ಶಿಕ್ಷೆಗೆ ಸಮಂಜಸವಲ್ಲ. ಆದುದರಿಂದ ಏಕ ಸದಸ್ಯ ನ್ಯಾಯ ಪೀಠದ ಆದೇಶದ ಬೆಳಕಿನಲ್ಲಿ ಸೇವೆಯಿಂದ ವಜಾ ಮಾಡಲಾದ ಆದೇಶವನ್ನು ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಯನ್ನು ದೋಷ ಮುಕ್ತನಾಗಿ ಮಾಡಬೇಕೆಂದು ಕೋರಿದರು.


ಉಭಯ ಪಕ್ಷಕಾರರ ವಾದ ಆಲಿಸಿದ ವಿಭಾಗೀಯ ನ್ಯಾಯಪೀಠವು ತಪ್ಪಿತಸ್ಥ ಅಧಿಕಾರಿ ಸಿಪ್ಪೇಗೌಡರ ವಿರುದ್ಧ ನಿಯಮಾನುಸಾರ ಇಲಾಖಾ ವಿಚಾರಣೆಯನ್ನು ನಡೆಸಲಾಗಿದೆ. ಕಳೆದ ಒಂದು ದಶಕದಿಂದ ತಪ್ಪಿತಸ್ಥ ಅಧಿಕಾರಿ ಕಚೇರಿಯ ಯಾವುದೇ ಕೆಲಸವನ್ನು ನಿರ್ವಹಿಸದೇ ಇರುವುದು ಕಂಡು ಬರುತ್ತದೆ. ನೌಕರರ ಸಂಘದ ಪದಾಧಿಕಾರಿಗಳಿಗೆ ತನ್ನ ದೈನಂದಿನ ಕಚೇರಿ ಕೆಲಸದಿಂದ ವಿನಾಯಿತಿ ಇಲ್ಲ. ಮೇಲಧಿಕಾರಿಗಳ ಆದೇಶವನ್ನು ಧಿಕ್ಕರಿಸಿರುವುದು ಗುರುತರ ದುರ್ವರ್ತನೆಯಾಗಿದೆ. ಆದುದರಿಂದ ನಿಯಮಾನುಸಾರ ವಿಚಾರಣೆ ನಡೆಸಿ ತಪ್ಪಿತಸ್ಥ ನೌಕರರಿಗೆ ಸೂಕ್ತ ದಂಡನೆ ವಿಧಿಸಿರುವುದು ಸಮಂಜಸವಾಗಿದೆ. ಶಿಸ್ತು ಪ್ರಾಧಿಕಾರ ನೀಡಿದ ಶಿಕ್ಷೆಯನ್ನು ಮಾರ್ಪಡಿಸುವ ಅಧಿಕಾರ ನ್ಯಾಯಾಲಯಗಳಿಗೆ ಇಲ್ಲ. ಈ ಎಲ್ಲಾ ಅಂಶಗಳ ಬೆಳಕಿನಲ್ಲಿ ಏಕ ಸದಸ್ಯ ನ್ಯಾಯ ಪೀಠವು ನೀಡಿದ ಆದೇಶ ಕಾನೂನಿನಡಿ ಊರ್ಜಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದ ವಿಭಾಗೀಯ ನ್ಯಾಯ ಪೀಠವು ಏಕ ಸದಸ್ಯ ನ್ಯಾಯ ಪೀಠದ ಆದೇಶವನ್ನು ರದ್ದುಪಡಿಸಿ ಶಿಸ್ತು ಪ್ರಾಧಿಕಾರವು ತಪ್ಪಿತಸ್ಥ ಅಧಿಕಾರಿ ಸಿಪ್ಪೇಗೌಡರನ್ನು ಸೇವೆಯಿಂದ ವಜಾಗೊಳಿಸಿ ಹೊರಡಿಸಿದ ಆದೇಶವನ್ನು ಎತ್ತಿ ಹಿಡಿಯಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ

Ads on article

Advertise in articles 1

advertising articles 2

Advertise under the article