ಗರ್ಭಿಣಿ ಸ್ಕ್ಯಾನಿಂಗ್ ದೋಷ: ರೇಡಿಯಾಲಜಿಸ್ಟ್‌ಗೆ 30 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಗರ್ಭಿಣಿ ಸ್ಕ್ಯಾನಿಂಗ್ ದೋಷ: ರೇಡಿಯಾಲಜಿಸ್ಟ್‌ಗೆ 30 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡಿ ದೋಷಪೂರಿತ ವರದಿ ನೀಡಿದ್ದ ರೇಡಿಯಾಲಜಿಸ್ಟ್ ವೈದ್ಯರಿಗೆ 30 ಲಕ್ಷ ರೂ. ದಂಡ ವಿಧಿಸಿ ಹಾಸನ ಜಿಲ್ಲಾ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಆಲೂರು ತಾಲೂಕಿನ ಹಳ್ಳಿಕೊಪ್ಪಲು ಗ್ರಾಮದ ಪವಿತ್ರಾ ಬಿ.ಆರ್. ಅವರು ಗರ್ಭಿಣಿ ಆಗಿದ್ದಾಗ ಕೆ.ಆರ್. ಪುರಂನಲ್ಲಿ ಇರುವ ರೇಡಿಯಾಲಜಿಸ್ಟ್ ಡಾ. ಕೆ.ವಿ. ಸುಜಾತಾ ಅವರ ಬಳಿ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದರು.
ಮಾರ್ಚ್ 15, 2023ರಂದು ಈ ಸ್ಕ್ಯಾನಿಂಗ್ ವರದಿ ನೀಡಿದ್ದ ಅವರು ಹುಟ್ಟುವ ಮಗು ಸದೃಢವಾಗಿದೆ. ಸೀಳು ತುಟಿ ಇಲ್ಲ. ಕಣ್ಣು ಮೂಗು ಸರಿಯಾಗಿದೆ ಎಂದು ಉಲ್ಲೇಖಿಸಿದ್ದರು. ಆದರೆ, ಜುಲೈ 19ರಂದು ಹುಟ್ಟಿದ ಹೆಣ್ಣು ಮಗುವಿಗೆ ಸೀಳು ತುಟಿ ಇತ್ತು.
ರೇಡಿಯಾಲಜಿಸ್ಟ್ ಅವರ ಈ ಪ್ರಮಾದ ಸೇವಾ ನ್ಯೂನ್ಯತೆಯಾಗಿದ್ದು, ಇದನ್ನು ಮೊದಲೇ ತಿಳಿಸಿದ್ದರೆ ಗರ್ಭಪಾತಕ್ಕೆ ಅವಕಾಶವಿತ್ತು. ಈಗ ಮಗು ಜೀವಿತಾವಧಿವರೆಗೂ ವೈದ್ಯೋಪಚಾರ ಪಡೆಯಬೇಕಿದೆ.
ಈ ಕೃತ್ಯದಿಂದ ಉಂಟಾಗಿರುವ ಮಾನಸಿಕ ಹಿಂಸೆ, ನೋವು, ವೈದ್ಯಕೀಯ ವೆಚ್ಚದ ಪರಿಹಾರವಾಗಿ ಒಟ್ಟು 50 ಲಕ್ಷ ರೂ. ಕೊಡಿಸುವಂತೆ ಗ್ರಾಹಕ ನ್ಯಾಯಾಲಯವನ್ನು ಕೋರಿಕೊಂಡಿದ್ದರು.
ಈ ಅರ್ಜಿಯನ್ನು ಪರಿಶೀಲಿಸಿದ ಗ್ರಾಹಕ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ., ಸದಸ್ಯರಾದ ಎಚ್. ವಿ. ಮಹಾದೇವ, ಅನುಪಮಾ ಆರ್. ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಸೇವಾ ನಿರ್ಲಕ್ಷ್ಯದಿಂದ ತಪ್ಪಾದ ವರದಿ ನೀಡಿದ ಪರಿಣಾಮವಾಗಿ ಅಂಗವಿಕಲ ಮಗು ಜನಿಸಿದೆ. ಹಾಗಾಗಿ, ಮಗುವಿನ ತಾಯಿ ಪವಿತ್ರಾ ಅವರಿಗೆ ರೂ. 30 ಲಕ್ಷ ನೀಡುವಂತೆ ಆದೇಶ ಹೊರಡಿಸಿತು.
ಮಗು 18 ವರ್ಷ ಆಗುವವರೆಗೆ ಮಗುವಿನ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 15 ಲಕ್ಷ ರೂ. ನಿಶ್ಚಿತ ಠೇವಣಿ ಇಡಬೇಕು ಉಳಿದ 15 ಲಕ್ಷ ರೂ.ಗಳನ್ನು ವೈದ್ಯಕೀಯ ವೆಚ್ಚ ಹಾಗೂ ಮಾನಸಿಕ ಹಿಂಸೆಯ ಪರಿಹಾರವಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರಿಹಾರವನ್ನು 45 ದಿನದೊಳಗೆ ನೀಡಬೇಕು. ತಪ್ಪಿದ್ದಲ್ಲಿ ಪರಿಹಾರ ಮೊತ್ತದ ಮೇಲೆ ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.