ಉಪ ನೋಂದಣಾಧಿಕಾರಿಗಳು ಆಸ್ತಿ ನೋಂದಣಿಯನ್ನು ನಿರಾಕರಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಉಪ ನೋಂದಣಾಧಿಕಾರಿಗಳು ಆಸ್ತಿ ನೋಂದಣಿಯನ್ನು ನಿರಾಕರಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಆದಾಯ ತೆರಿಗೆ ಬಾಕಿ ಇದೆ ಎಂಬ ಕಾರಣಕ್ಕೆ ಆಸ್ತಿ ನೋಂದಣಿ ಮಾಡುವುದಕ್ಕೆ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ನೋಂದಣಿ ಕಾಯ್ದೆ ಮತ್ತು ರಾಜ್ಯ ಸರ್ಕಾರ ರೂಪಿಸುವ ನೋಂದಣಿ ನಿಯಮಗಳ ಅನ್ವಯ ಉಪ ನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದರ ಬದಲಿಗೆ ನಿಯಮ ಬಾಹಿರವಾಗಿ ಆಸ್ತಿ ನೋಂದಣಿ ಮಾಡಲು ಉಪ ನೋಂದಣಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ಬಾಕಿ ಇದೆ ಎಂಬ ಕಾರಣ ನೀಡಿ ಹರಾಜು ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸಿರುವ ಸಬ್ ರಿಜಿಸ್ಟ್ರಾರ್‌ಗಳ ನಿರ್ಧಾರವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಮಾತ್ರಲ್ಲದೆ, ನೋಂದಣಿ ನಿಯಮಗಳ ಅಡಿ ಯಾವುದೇ ಗೊಂದಲ ಇಲ್ಲದಿದ್ದರೆ ಆಸ್ತಿ ಕ್ರಯ ಪತ್ರವನ್ನು ನೋಂದಣಿ ಮಾಡದೆ ನಿರಾಕರಿಸುವಂತಿಲ್ಲ ಮತ್ತು ಅಂತಹ ಅಧಿಕಾರ ಅವರಿಗೆ ಇಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ನೋಂದಣಿ ನಿಯಮಗಳ ಕುರಿತು ಸೂಕ್ತ ಸುತ್ತೋಲೆಯನ್ನು ಹೊರಡಿಸಬೇಕು ಎಂದು ನ್ಯಾಯಪೀಠ ಸೂಚನೆಯನ್ನೂ ನೀಡಿದೆ.
ಪ್ರಕರಣ ಏನು..?
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಿ ಹೊಂಬೇಗೌಡ ನಗರದಲ್ಲಿ ಇರುವ 6000 ಚದರ ಅಡಿಯ ಅಡಮಾನ ಆಸ್ತಿಯನ್ನು 2022ರ ಮಾರ್ಚ್‌ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿತ್ತು. ಈ ವೇಳೆ ಭರತ್ ಗೌಡ ಎಂಬವರು ಹರಾಜಿನಲ್ಲಿ ಯಶಸ್ವಿ ಬಿಡ್ಡುದಾರರಾಗಿ ಆಸ್ತಿ ಖರೀದಿಸಿದ್ದರು. ಹರಾಜು ಪ್ರಕ್ರಿಯೆಗಳು ಮುಗಿದ ನಂತರ 2022ರ ಸೆಪ್ಟೆಂಬರ್‌ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು.
ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕ ಪಾವತಿಸಿದ್ದ ಅರ್ಜಿದಾರ ಭರತ್ ಗೌಡ ತನ್ನ ಹೆಸರಿಗೆ ಆಸ್ತಿ ನೋಂದಣಿ ಮಾಡಿಕೊಡುವಂತೆ ಜೆ.ಪಿ.ನಗರದ ಉಪ ನೋಂದಣಿ ಕಚೇರಿಗೆ ಕೋರಿಕೊಂಡರು. ಆಧರೆ, ಸಬ್ ರಿಜಿಸ್ಟ್ರಾರ್, ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೋಂಡಿದ್ದಾರೆ. ಆದ್ದರಿಂದ ನೋಂದಣಿ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು.
2024ರ ಫೆಬ್ರವರಿ 18ರಂದು ಮತ್ತೆ ಮನವಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಭರತ್ ಹೈಕೋರ್ಟ್ ಮೆಟ್ಟಿಲೇರಿದ್ದರು.