ಉಪ ವಿಭಾಗಾಧಿಕಾರಿಗೆ 25 ಸಾವಿರ ದಂಡ: ಎಸಿ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ ಆಗಲು ಕಾರಣವೇನು..?
ಉಪ ವಿಭಾಗಾಧಿಕಾರಿಗೆ 25 ಸಾವಿರ ದಂಡ: ಎಸಿ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ ಆಗಲು ಕಾರಣವೇನು..?
ಕಾನೂನನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಸ್ತಿ ಖರೀದಿಯ ಕ್ರಯಪತ್ರವನ್ನು ರದ್ದುಪಡಿಸಿದ್ದ ಉಪವಿಭಾಗಾಧಿಕಾರಿಯವರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಅಧಿಕಾರಿಗೆ 25 ಸಾವಿರ ರೂ. ದಂಡ ವಿಧಿಸಿದೆ.
ಕರ್ನಾಟಕ ಹೈಕೋರ್ಟ್‌ನ ಸಚಿನ್ ಶಂಕರ್ ಮಗ್ದೂಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ ಪೀಠ) ಈ ಮಹತ್ವದ ತೀರ್ಪು ನೀಡಿದೆ.
ಹಾವೇರಿಯ ಸವಣೂರು ಉಪ ವಿಭಾಗಾಧಿಕಾರಿ ಅವರ ಕ್ರಮದ ಬಗ್ಗೆ ಹೈಕೋರ್ಟ್ ಗರಂ ಆಗಿದ್ದು, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ನ್ನು ಉಪ ವಿಭಾಗಾಧಿಕಾರಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದಾಗಿ ಸೂಕ್ತ ಬೆಲೆ ನೀಡಿ ಆಸ್ತಿ ಖರೀದಿ ಮಾಡಿದ ವ್ಯಕ್ತಿಯ ಕಾನೂನಾತ್ಮಕ ಹಕ್ಕಿಗೂ ಧಕ್ಕೆ ಉಂಟು ಮಾಡಿದ್ಧಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸರಿಯಾದ ನ್ಯಾಯವ್ಯಾಪ್ತಿ ಇಲ್ಲದಿದ್ದರೂ ನೋಂದಾಯಿತ ಕ್ರಯಪತ್ರವನ್ನು ಉಪ ವಿಭಾಗಾಧಿಕಾರಿಯವರು ರದ್ದುಗೊಳಿಸಿದ್ದಾರೆ. ಈ ಮೂಲಕ ಆಸ್ತಿ ವಹಿವಾಟಿನ ಕಾನೂನಾತ್ಮಕ ಸ್ಥಿರತೆಯನ್ನು ದುರ್ಬಲಗೊಳಿಸಿದ್ದಾರೆ. ಜೊತೆಗೆ ಆಸ್ತಿ ಖರೀದಿಸಿದ ಅರ್ಜಿದಾರರಿಗೆ ಅನಗತ್ಯವಾಗಿ ದಾವೆ ಹೂಡುವ ಮತ್ತು ಹೆಚ್ಚುವರಿ ಹಣ ನೀಡಿ ವಿವಾದ ಬಗೆಹರಿಸಿಕೊಳ್ಳಬೇಕಾದ ಆರ್ಥಿಕ ಸಂಕಷ್ಟವನ್ನು ತಂದಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹಿರಿಯ ನಾಗರಿಕ ಕಾಯ್ದೆಯ ಸೆಕ್ಷನ್ 23 ಏನು ಹೇಳುತ್ತದೆ..?
ಹಿರಿಯ ನಾಗರಿಕ ಕಾಯ್ದೆಯು ವಯೋವೃದ್ಧರ ಹಿತಾಸಕ್ತಿಯನ್ನು ಕಾಪಾಡುತ್ತದೆ. ಈ ಕಾಯ್ದೆಯ ಸೆಕ್ಷನ್ 23ರಡಿಯಲ್ಲಿ ಪರಿಹಾರ ಕೋರುವಾಗ ವರ್ಗಾವಣೆಗೊಂಡ ಆಸ್ತಿಯು ನಾಗರಿಕರ ಮೂಲಭೂತ ಅಗತ್ಯಗಳನ್ನು ಮತ್ತು ಭೌತಿಕ ಅಗತ್ಯಗಳನ್ನು ಪೂರೈಸುವ ಷರತ್ತುಗಳನ್ನು ಒಳಗೊಂಡಿರಬೇಕು.
ಆದರೆ, ಈ ಪ್ರಕರಣದ ಆಸ್ತಿಯು ವಿಭಜನೆ ಮೂಲಕ ಹಂಚಿಕೆಯಾಗಿದ್ದು, ಈ ಮೇಲೆ ತಿಳಿಸಿದ ಯಾವ ಷರತ್ತುಗಳನ್ನು ಒಳಗೊಂಡಿರಲಿಲ್ಲ. ನಂತರ ಆಸ್ತಿಯನ್ನು ಅದರ ವಾರಸುದಾರರು ಮಾರಾಟ ಮಾಡಿದ್ಧಾರೆ. ಖರೀದಿದಾರರು ಸೂಕ್ತ ಪ್ರತಿಫಲ ನೀಡಿ ಖರೀದಿ ಮಾಡಿದ್ದಾರೆ.
ಇದೆಲ್ಲವನ್ನು ಪರಿಗಣಿಸಿದರೆ, ಉಪವಿಭಾಗಾಧಿಕಾರಿಯವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದಾರೆ ಎಂದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಪೀಠ, ಎಸಿ ಆದೇಶವನ್ನು ರದ್ದುಗೊಳಿಸಿ ಉಪವಿಭಾಗಾಧಿಕಾರಿಗೆ 25 ಸಾವಿರ ರೂ. ದಂಡ ವಿಧಿಸಿದೆ.