ವಕೀಲರ ಸ್ಟಿಕ್ಕರ್ ದುರ್ಬಳಕೆ: ಕಠಿಣ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ
ವಕೀಲರ ಸ್ಟಿಕ್ಕರ್ ದುರ್ಬಳಕೆ: ಕಠಿಣ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ
ಖಾಸಗಿ ವಾಹನಗಳ ಮೇಲೆ "ವಕೀಲರ ಸ್ಟಿಕ್ಕರ್" ಹಾಕಿಕೊಂಡು ಅವುಗಳನ್ನು ದುರ್ಬಳಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಮದ್ರಾಸ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್. ಮಹಾದೇವನ್ ಮತ್ತು ನ್ಯಾ. ಮೊಹಮ್ಮದ್ ಶಫೀಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ.
ಕೆಲವು ವಕೀಲರು ತಮ್ಮ ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ಅಂಟಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಎಸ್. ದೇವದಾಸ್ ಗಾಂಧಿ ವಿಲ್ಸನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರ ಕ್ರಮದಿಂದ ತಪ್ಪಿಸಿಕೊಳ್ಳಲು ಹಾಗೂ ಪೊಲೀಸರನ್ನು ಬೆದರಿಸಲು ವಕೀಲರ ಸ್ಟಿಕ್ಕರ್‌ಗಳನ್ನು ಖಾಸಗಿ ವಾಹನಗಳ ಮೇಲೆ ಅಳವಡಿಸಿರುತ್ತಾರೆ. ಈ ಮೂಲಕ ವಕೀಲರ ಸ್ಟಿಕ್ಕರ್ ದುರ್ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.
ವಕೀಲರು ತಮ್ಮ ಖಾಸಗಿ ವಾಹನಗಳಿಗೆ ಅಡ್ವಕೇಟ್ ಸ್ಟಿಕ್ಕರ್ ಅಂಟಿಸಿ ಸಂಚಾರಿ ನಿಯಮಗಳ ಉಲ್ಲಂಘನೆ ವೇಳೆ ವಿನಾಯಿತಿ ಪಡೆಯುತ್ತಾರೆ. ಇದರಿಂದ ಅವರು ಸಂಚಾರಿ ಅಪರಾಧಗಳಿಂದ ಪಾರಾಗುತ್ತಾರೆ. ತುರ್ತು ಸಂದರ್ಭಗಳಲ್ಲಿ ವೈದ್ಯರಿಗೆ ಸ್ಟಿಕ್ಕರ್‌ಗಳ ಅಗತ್ಯ ಇರುವುದಿಲ್ಲ. ಅದೇ ರೀತಿ ವಕೀಲರು ನ್ಯಾಯಾಲಯದಿಂದ ಹೊರಗೆ ಬಂದ ಮೇಲೆ ಸ್ಟಿಕ್ಕರ್‌ಗಳ ಅಗತ್ಯವಿರುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಇದನ್ನು ಆಲಿಸಿದ ನ್ಯಾಯಪೀಠ, ಸ್ಟಿಕ್ಕರ್‌ಗಳ ದುರ್ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳನ್ನು ನೀಡಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಈ ತೀರ್ಪಿನಲ್ಲಿ ಹೇಳಲಾಗಿದೆ ಎಂದು ನ್ಯಾಯಪೀಠ ಹೇಳಿತು.
ಅಡ್ವಕೇಟ್‌ಗಳು ಬಳಸುವ ಸ್ಟಿಕ್ಕರ್‌ಗಳ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ವಕೀಲರ ಪರಿಷತ್ತಿಗೆ ನೋಟೀಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿತು.