ಮಾರಾಟದ ನಂತರವೂ ಬಿಲ್ಡರ್‌ಗಳಿಗೆ ಜವಾಬ್ದಾರಿ ಇದೆ: ರೇರಾದ ಮಹತ್ವದ ಆದೇಶ- ಬಿಲ್ಡರ್‌ಗಳ ಹೊಣೆಗಾರಿಕೆ ಬಗ್ಗೆ ಇಲ್ಲಿದೆ ವಿವರ
ಮಾರಾಟದ ನಂತರವೂ ಬಿಲ್ಡರ್‌ಗಳಿಗೆ ಜವಾಬ್ದಾರಿ ಇದೆ: ರೇರಾದ ಮಹತ್ವದ ಆದೇಶ- ಬಿಲ್ಡರ್‌ಗಳ ಹೊಣೆಗಾರಿಕೆ ಬಗ್ಗೆ ಇಲ್ಲಿದೆ ವಿವರ
- ಬಿಲ್ಡರ್‌ಗಳ ಪಾಲಿಗೆ ಇದು ಕಹಿ ಸುದ್ದಿ!
- ನೀರು ಸೋರಿದ್ರೂ ಬಿಲ್ಡರ್‌ಗಳೇ ಹೊಣೆ
- ಫ್ಲ್ಯಾಟ್ ಮಾರಾಟದ ನಂತರವೂ ಐದು ವರ್ಷದ ಜವಾಬ್ದಾರಿ
- ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಮಹತ್ವದ ಆದೇಶ
ಫ್ಲ್ಯಾಟ್/ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸಿ ಕಳಪೆ ಕಾಮಗಾರಿಯ ಸಮಸ್ಯೆ ಎದುರಿಸುವ ಸಂತ್ರಸ್ತರು ಈ ಸುದ್ದಿ ಓದಲೇಬೇಕು.
ಫ್ಲ್ಯಾಟ್‌ಗಳನ್ನು ನಿರ್ಮಿಸಿದ ಇನ್ಮುಂದೆ ಬಿಲ್ಡರ್‌ಗಳು ತಮ್ಮ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ ನಂತರ ತಮಗೂ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲವೆಂದು ನುಣುಚಿಕೊಳ್ಳುವಂತಿಲ್ಲ.
ಫ್ಲ್ಯಾಟ್‌ಗಳನ್ನು ಖರೀದಿದಾರರಿಗೆ ಹಸ್ತಾಂತರಿಸಿದ ನಂತರ ಐದು ವರ್ಷದೊಳಗೆ ಕಟ್ಟಡದಲ್ಲಿ ಬಿರುಕು ಮೂಡುವುದು, ನೀರು ಸೋರುವುದು ಮತ್ತಿತರರ ಯಾವುದೇ ಲೋಪದೋಷ ಕಂಡುಬಂದರೂ ಅದಕ್ಕೆ ಬಿಲ್ಡರ್‌ಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಎಸ್‌ಎನ್‌ಆರ್ ಸ್ಕ್ವೇರ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಫ್ಲ್ಯಾಟ್ ಮಾಲೀಕ ಪಂಕಜ್ ಸಿಂಗ್ ದಾಖಲಿಸಿದ್ದ ದೂರು ಅರ್ಜಿಯ ವಿಚಾರಣೆ ನಡೆಸಿದ ಪ್ರಾಧಿಕಾರದ ಸದಸ್ಯ ಜಿ.ಆರ್.ರೆಡ್ಡಿ ಅವರಿದ್ದ ಪೀಠ ಈ ಆದೇಶ ನೀಡಿದೆ.
ಬಹುತೇಕ ಪ್ರಕರಣಗಳಲ್ಲಿ ಬೃಹತ್ ಅಪಾರ್ಟ್ ಮೆಂಟ್ ಗಳನ್ನು ಕಟ್ಟುವ ಬಿಲ್ಡರ್‌ಗಳು ತಾವು ಕಟ್ಟಿದ ಫ್ಲ್ಯಾಟ್‌ಗಳನ್ನು ಸೇಲ್ ಮಾಡಿದ ಬಳಿಕ ಆ ಬಿಲ್ಡಿಂಗ್‌ನತ್ತ ಮುಖ ಮಾಡೋದಿಲ್ಲ. ಒಂದೆರಡು ವರ್ಷಗಳಲ್ಇ ಆ ಕಟ್ಟಡದಲ್ಲಿ ಬಿರುಕು ಅಥವಾ ಇನ್ನಿತರೆ ಲೋಪದೋಷಗಳು ಕಂಡುಬಂದರೆ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದು ಬಿಡುತ್ತಾರೆ. ಒಂದಷ್ಟು ಖರೀದಿದಾರರು ತಾವು ಖರೀದಸಿದ ಫ್ಲ್ಯಾಟ್ ಕ್ರಯಪತ್ರ ಹಾಗೂ ಇತರ ಮಹತ್ವದ ದಾಖಲೆ ಪತ್ರಗಳು, ನಿಬಂಧನೆಗಳನ್ನು ಸರಿಯಾಗಿ ಓದದೇ ಸಹಿ ಮಾಡಿ ಮತ್ತೆ ಪೇಚಾಡುತ್ತಾರೆ, ಪರದಾಡುತ್ತಾರೆ. ಇಂತಹ ಬೇಜವಾಬ್ದಾರಿ ಬಿಲ್ಡರ್‌ಗಳಿಗೆ ಈ ಆದೇಶ ಎಚ್ಚರಿಕೆ ಗಂಟೆಯಾಗಿದೆ.
ಕೆ-ರೇರಾ ನೀಡಿರುವ ಮಹತ್ವದ ಈ ತೀರ್ಪಿನ ಪ್ರಕಾರ, ಫ್ಲ್ಯಾಟ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ ನಂತರ ಮುಂದಿನ ಐದು ವರ್ಷಗಳ ಕಾಲ ಕಟ್ಟಡದಲ್ಲಿಯಾವುದೇ ಸಮಸ್ಯೆ ಎದುರಾದರೂ ಬಿಲ್ಡರ್‌ಗಳೇ ಹೊಣೆಗಾರರಾಗಿದ್ದು, ಈ ಲೋಪವನ್ನು ಅವರೇ ಸ್ವಂತ ಖರ್ಚಿನಿಂದ ಸರಿಪಡಿಸಬೇಕಾಗುತ್ತದೆ.
ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 2016ರ ಸೆಕ್ಷನ್ 31ರಡಿ ಸಲ್ಲಿಸಿದ್ದ ದೂರನ್ನು ಮಾನ್ಯ ಮಾಡಿರುವ ಪ್ರಾಧಿಕಾರ, ಪ್ರತಿವಾದಿ ಎಸ್‌ಎನ್‌ಆರ್ ಸ್ಕ್ವೇರ್ ಪ್ರೈ. ಲಿ.ಗೆ ಅರ್ಜಿದಾರರ ಫ್ಲ್ಯಾಟ್‌ನಲ್ಲಿ ನೀರು ಸೋರಿಕೆ ತಡೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ಒಂದು ವೇಳೆ ಪ್ರತಿವಾದಿ ಬಿಲ್ಡರ್ ಆದೇಶ ಪಾಲಿಸದಿದ್ದರೆ ಅರ್ಜಿದಾರರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದೂ ಪ್ರಾಧಿಕಾರ ಹೇಳಿದೆ.