ಜಡ್ಜ್ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ ವಕೀಲರು: ಪುಣೆಯ ವಕೀಲರ ಕೃತ್ಯದ ಹಿಂದಿದೆ ಕ್ಷುಲ್ಲಕ ಕಾರಣ!
ಜಡ್ಜ್ ವಿರುದ್ಧ ಮುಖ್ಯ ನ್ಯಾಯಮೂರ್ತಿಗೆ ದೂರು ನೀಡಿದ ವಕೀಲರು: ಪುಣೆಯ ವಕೀಲರ ಕೃತ್ಯದ ಹಿಂದಿದೆ ಕ್ಷುಲ್ಲಕ ಕಾರಣ!
ಪುಣೆಯ ವಕೀಲರೊಬ್ಬರು ತಮ್ಮ ಮೇಲೆ ಕೋರ್ಟ್‌ಗಳು ವಿಧಿಸಿರುವ ದಂಡವನ್ನು ಹಿಂದಕ್ಕೆ ಪಡೆಯುವಂತೆ ಕೋರಿ ವಿವಿಧ ಪೀಠಗಳಲ್ಲಿ ಒಂದೇ ದಿನ ಮನವಿ ಸಲ್ಲಿಸಿದ ಅಪರೂಪದ ಪ್ರಸಂಗ ನಡೆದಿದೆ.
ಈ ಮನವಿಯನ್ನು ಪುರಸ್ಕರಿಸಲು ಒಪ್ಪದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ವಿರುದ್ಧವೇ ಪುಣೆಯ ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ದೂರು ಸಲ್ಲಿಸಿದ ವಿಶೇಷ ಪ್ರಸಂಗ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದೆ.
ಘಟನೆಯ ವಿವರ
ಸುಪ್ರೀಂ ಕೋರ್ಟ್ ವಕೀಲರನ್ನು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಬೇಕು ಎಂದು ಕೋರಿ ವಕೀಲರಾದ ಅಶೋಕ್ ಪಾಂಡೆ ಅವರು ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು.
ಈ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಪೀಠ ಸದ್ರಿ ವಕೀಲರಿಗೆ ರೂ. 50 ಸಾವಿರ ದಂಡ ವಿಧಿಸಿತ್ತು. ಈ ದಂಡ ವಿಧಿಸಿದ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಕೋರಿ ಅಶೋಕ್ ಪಾಂಡೆ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ. ಮನೀಶ್ ಅವರಿದ್ದ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕೋರ್ಟ್ ತೀರ್ಪು ನೀಡಿದ ಬಳಿಕ ನೀವು ವಿದೇಶ ಪ್ರಯಾಣ ಮಾಡಿರುತ್ತೀರಿ. ಈಗ ದಂಡ ಕಟ್ಟಲಾಗುವುದಿಲ್ಲ ಎನ್ನುವಂತಿಲ್ಲ. ಎರಡು ವಾರದೊಳಗೆ ಆದೇಶದಂತೆ ದಂಡ ಕಟ್ಟಿ ಎಂದು ತಾಕೀತು ಮಾಡಿತು.
ನಾನು ಬಡವ, ಯಾವುದೇ ಪ್ರಕರಣಗಳು ನನ್ನ ಕೈಯಲ್ಲಿ ಇಲ್ಲ. ಹೀಗಾಗಿ ಕೋರ್ಟ್ ವಿಧಿಸಿದ ದಂಡವನ್ನು ಹಿಂದಕ್ಕೆ ಪಡೆಯಬೇಕು ಎಂದು ಅಶೋಕ್ ಪಾಂಡೆ ಕೈ ಮುಗಿದು ನ್ಯಾಯಪೀಠದ ಮುಂದೆ ವಿನಂತಿಸಿದರು. ಒಂದು ಲಕ್ಷ ರೂ. ದಂಡ ವಿಧಿಸಿದ ಪ್ರಕರಣದಲ್ಲಿ ನ್ಯಾ. ಬಿ.ಆರ್. ಗವಾಯಿ ಅವರಿದ್ದ ಪೀಠಕ್ಕೆ ಮನವಿ ಸಲ್ಲಿಸಿದ ಪಾಂಡೆ, ನೀವು ಮುಂದಿನ ಸಿಜೆ ಆಗಲಿದ್ದೀರಿ. ನನ್ನ ದಂಡ ಹಿಂಪಡೆಯಿರಿ ಎಂದು ಮನವಿ ಮಾಡಿದರು.
ಇದರಿಂದ ಕೋಪಗೊಂಡ ನ್ಯಾ. ಗವಾಯಿ, ದಯವಿಟ್ಟು ಹೊರಹೋಗಿ, ಇಲ್ಲದಿದ್ದರೆ ಸೆಕ್ಯೂರಿಟಿ ಸಿಬ್ಬಂದಿಯನ್ನು ಕರೆಸಲಾಗುವುದು ಎಂದು ಗುಡುಗಿದರು.
ತಕ್ಷಣ ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಬಳಿ ದಾವಿಸಿದ ಪಾಂಡೆ, ನನ್ನ ಲೈಸನ್ಸ್ ರದ್ದು ಮಾಡುವುದಾಗಿ ನ್ಯಾಯಮೂರ್ತಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್, ಕೋರ್ಟ್ ಸಮಯ ವ್ಯರ್ಥ ಮಾಡಬೇಡಿ ಎಂದು ಪಾಂಡೆ ಅವರಿಗೆ ಎಚ್ಚರಿಕೆ ನೀಡಿದರು.