ಆತ್ಮಹತ್ಯೆಗೆ ಪ್ರಚೋದನೆ; ಪತ್ನಿಯ ಮರಣಪೂರ್ವ ಹೇಳಿಕೆ ಇದ್ದರೂ ಕ್ರೌರ್ಯ ಸಾಬೀತಾಗದು: ವಿಚಾರಣಾ ನ್ಯಾಯಾಲಯದ ತೀರ್ಪು ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್
ಆತ್ಮಹತ್ಯೆಗೆ ಪ್ರಚೋದನೆ; ಪತ್ನಿಯ ಮರಣಪೂರ್ವ ಹೇಳಿಕೆ ಇದ್ದರೂ ಕ್ರೌರ್ಯ ಸಾಬೀತಾಗದು: ವಿಚಾರಣಾ ನ್ಯಾಯಾಲಯದ ತೀರ್ಪು ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್
ಪತಿ ಪತ್ನಿ ನಡುವಿನ ಜಗಳ ಐಪಿಸಿ ಸೆಕ್ಷನ್ 498 ಅಡಿ ಕ್ರೌರ್ಯ ಮತ್ತು ಕಿರುಕುಳದ ಅಪರಾಧ ಕೃತ್ಯ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾ. ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಪತ್ನಿಯ ಮೇಲೆ ಪತಿ ಹಾಗೂ ಅವರ ಕುಟುಂಬಸ್ಥರಿಂದ ಕ್ರೌರ್ಯ ನಡೆದಿರುವುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಐಪಿಸಿ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧವಾಗಬೇಕು ಎಂದರೆ ಆರೋಪಿಯ ಕೃತ್ಯ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹಾಗೂ ಸಕ್ರಿಯ ಪಾತ್ರ ನಿರ್ವಹಿಸಿರಬೇಕು. ಆತ್ಮಹತ್ಯೆಗೆ ಪ್ರೇರೇಪಿಸಲು ಅಥವಾ ಸಹಾಯ ಮಾಡಲು ಆರೋಪಿ ಕಡೆಯಿಂದ ಸಕಾರಾತ್ಮಕ ಕೃತ್ಯವಿಲ್ಲದಿದ್ದರೆ ಅದು ಕಾನೂನಿನಡಿ ಅಪರಾಧವಾಗಿ ಉಳಿಯುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪತ್ನಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕ್ರೌರ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ತಮ್ಮನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿಯ ಬಿ.ಎಸ್. ಜನಾರ್ದನ, ಆತನ ತಾಯಿ ಬಿ.ಎಸ್. ಉಮಾವತಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣದ ವಿವರ
ಸರಸ್ವತಿ ಎಂಬವರನ್ನು ಜನಾರ್ದನ 1996ರಲ್ಲಿ ವಿವಾಹವಾಗಿದ್ದು, 1998ರಲ್ಲಿ ಒಂದು ಮುಂಜಾನೆ ಸರಸ್ವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಪೊಲೀಸ್ ಕಾನ್ಸ್‌ಟೆಬಲ್ ಮುಂದೆ ಮರಣಪೂರ್ವ ಹೇಳಿಕೆ ನೀಡಿದ ಸರಸ್ವತಿ, ತನ್ನ ಪತಿ ಶೀಲ ಮತ್ತು ನಿಷ್ಠೆಯನ್ನು ಶಂಕಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದರು.
ಅಷ್ಟೇ ಅಲ್ಲದೆ, ಪತಿಯ ಜೊತೆಗೆ ಆಗಾಗ ಜಗಳ ನಡೆಯುತ್ತಿತ್ತು. ಹಿರಿಯರು ಬುದ್ದಿವಾದ ಹೇಳಿದ್ದರೂ ಪತಿಯ ನಡತೆ ಸುಧಾರಣೆ ಕಾಣಲಿಲ್ಲ ಮತ್ತು ತಮಗೆ ಕಿರುಕುಳ ಮುಂದುವರಿಸಿದ್ದರು ಎಂದು ಪತ್ನಿ ಆರೊಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 6ರಂದು ಸರಸ್ವತಿ ಸಾವನ್ನಪ್ಪಿದ್ದರು.
ಈ ಮರಣಪೂರ್ವ ಹೇಳಿಕೆಯನ್ನು ಆಧರಿಸಿ ಪೊಲೀಸರು ಸರಸ್ವತಿಯ ಪತಿ ಜನಾರ್ದನ ಹಾಗೂ ಅತ್ತೆ ಉಮಾವತಿ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಪೂರ್ಣಗೊಳಿಸಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.
ಮಡಿಕೇರಿಯ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಆತ್ಮಹತ್ಯೆಗೆ ಪ್ರಚೋದನೆ ನಿಡಿದ ಆರೋಪದಡಿ ಜನಾರ್ದನ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ಅವರ ತಾಯಿಗೆ ನಾಲ್ಕು ವರ್ಷ ಕಠಿಣ ಸಜೆಯ ಶಿಕ್ಷೆ ದಂಡದ ಜೊತೆಗೆ ನೀಡಿತ್ತು.
ಈ ಆದೇಶವನ್ನು ಅರ್ಜಿದಾರ ಅಪರಾಧಿಗಳು ಹೈಕೋರ್ಟ್ ನ್ಯಾಯಪೀಠದ ಮುಂದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದ ಆರೋಪ ಜನಾರ್ದನ ಅವರ ಮೇಲಿದೆ. ಮನೆ ಕೆಲಸ ತೃಪ್ತಿಕರವಾಗಿಲ್ಲ ಎಂದು ಪತಿಯ ತಾಯಿಯ ವಿರುದ್ಧ ಆರೋಪವಿದೆ.
ಮೃತಳ ಆಪ್ತ ಸಂಬಂಧಿಕರು, ನೆರೆಹೊರೆಯವರು ನ್ಯಾಯಾಲಯದ ಮುಂದೆ ನೀಡಿದ ಸಾಕ್ಷಿಯ ಪ್ರಕಾರ ಸರಸ್ವತಿಗೆ ಪತಿಯಿಂದ ಯಾವುದೇ ಕಿರುಕುಳ ಇರಲಿಲ್ಲ ಮತ್ತು ಅವರು ಪತ್ನಿಯನ್ನು ಕೆಟ್ಟದ್ದಾಗಿ ನಡೆಸಿಕೊಂಡಿಲ್ಲ. ಪತ್ನಿ ಮತ್ತು ಪತಿಯ ನಡುವಿನ ಸಂಬಂಧ ಸೌಹಾರ್ದಯುತವಾಗಿತ್ತು ಎಂದು ಸಾಕ್ಷಿ ನುಡಿದಿದ್ದರು.
ಇದನ್ನು ಗಮನಿಸಿದ ನ್ಯಾಯಪೀಠ, ಆರೋಪಿಗಳು ಮೃತರಿಗೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸಾಕ್ಷಿಗಳಾಗಿ ಮೃತ ಪೋಷಕರು, ಸಹೋದರ ಮತ್ಉತ ಸಹೋದರಿಯರು ನುಡಿದಿದ್ದ ಸಾಕ್ಷ್ಯ ಆಧರಿಸಿ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈ ತೀರ್ಪು ಕ್ರಮ ಬಾಹಿರವಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.