ಗಂಭೀರ ಸ್ವರೂಪಕ್ಕೆ ಡೆಂಗಿ: ಪತ್ರಿಕೆಯ ವಾಚಕರ ವಾಣಿಯನ್ನೇ ಸ್ವಯಂಪ್ರೇರಿತ ಪಿಐಎಲ್ ಆಗಿ ದಾಖಲಿಸಿದ ಕರ್ನಾಟಕ ಹೈಕೋರ್ಟ್
ಗಂಭೀರ ಸ್ವರೂಪಕ್ಕೆ ಡೆಂಗಿ: ಪತ್ರಿಕೆಯ ವಾಚಕರ ವಾಣಿಯನ್ನೇ ಸ್ವಯಂಪ್ರೇರಿತ ಪಿಐಎಲ್ ಆಗಿ ದಾಖಲಿಸಿದ ಕರ್ನಾಟಕ ಹೈಕೋರ್ಟ್
ರಾಜ್ಯದಲ್ಲಿ ಡೆಂಗಿ ಮಹಾಮಾರಿ ಗಂಭೀರ ಸ್ವರೂಪಕ್ಕೆ ತಿರುಗಿದ್ದು,ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾಚಕರ ವಾಣಿಯನ್ನು ಆಧರಿಸಿ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ಜಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡಿದೆ.
ಡೆಂಗಿ ಜ್ವರ ಹೆಚ್ಚಳ ಸಂಬಂಧ ರಾಜ್ಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ಡೆಕ್ಕನ್ ಹೆರಾಲ್ಡ್‌ನ ಜುಲೈ 9ರ ಸಂಚಿಕೆಯಲ್ಲಿ ರಾಯಚೂರಿನ ನಿವಾಸಿ ಎಚ್.ಕೆ. ವಿಜಯಕುಮಾರ್ ಅವರು ವಾಚಕರ ವಾಣಿಗೆ ಪತ್ರ ಬರೆದಿದ್ದರು.
ವಾಚಕರ ವಾಣಿಯ ಪತ್ರವನ್ನೇ ಸ್ವಯಂಪ್ರೇರಿತ ಅರ್ಜಿಯನ್ನಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರಿಗೆ ತುರ್ತು ನೋಟೀಸ್ ಜಾರಿಗೊಳಿಸಿ ಆದೇಶ ಹೊರಡಿಸಿತು.
ಕಲಾಪದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನ್ಯಾಯಾಲಯದ ಆದೇಶವನ್ನು ತಕ್ಷಣ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಅಡ್ವಕೇಟ್ ಜನರಲ್ ಅವರ ನಿವೇದನೆಯನ್ನು ದಾಖಲಿಸಿಕೊಂಡ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 23 ಕ್ಕೆ ಮುಂದೂಡಿತು.