ಇಡಿ ವಿರುದ್ಧ ಎಫ್‌ಐಆರ್: ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ- ಸರ್ಕಾರದ ಪ್ರತಿತಂತ್ರಕ್ಕೆ ಬ್ರೇಕ್, ಸಿಎಂ ಧರಣಿ
ಇಡಿ ವಿರುದ್ಧ ಎಫ್‌ಐಆರ್: ಅಧಿಕಾರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆ- ಸರ್ಕಾರದ ಪ್ರತಿತಂತ್ರಕ್ಕೆ ಬ್ರೇಕ್, ಸಿಎಂ ಧರಣಿ
ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಸೇರಿಸಲು ಒತ್ತಡ ಹೇರಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ, ಇಡಿ ವಿರುದ್ಧದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತನಿಖೆಯ ನೆಪದಲ್ಲಿ ಇಡಿ ಅಧಿಕಾರಿಗಳು ಸಮಾಜ ಕಲ್ಯಾಣಗಳ ಮೇಲೆ ಒತ್ತಡ ಹಾಕಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ನೀಡಲಾದ ದೂರನ್ನು ಪರಿಗಣಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮನೋಜ್ ಮಿತ್ತಲ್, ಸಹಾಯಕ ನಿರ್ದೇಶಕ ಮುರಳಿ ಕಣ್ಣನ್ ಅವರು ಈ ಎಫ್‌ಐಆರ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು..
ಸದ್ಯದ ಮಟ್ಟಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ತನಿಖೆಗೆ ತಡೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆ ವೇಳೆ ತನಿಖೆ ಸಂಬಂಧಿಸಿ ಸಂಪೂರ್ಣ ದಾಖಲೆಯನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ಆಗಸ್ಟ್ 21ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇಡಿ ಅಧಿಕಾರಿ ಮನೋಜ್ ಮಿತ್ತಲ್ ಐದು ಲಕ್ಷ ರೂ. ಲಂಚ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ. ಜಪ್ತಿ ಮಾಡಿದ್ದ ಖಾತೆಯನ್ನು ವ್ಯವಹರಣೆಗೆ ಮುಕ್ತಗೊಳಿಸಲು ಮನೋಜ್ ಮಿತ್ತಲ್ ಲಂಚ ಪಡೆದಿದ್ದಾರೆ. ಈ ಅಧಿಕಾರಿಯ ಹಿಂದಿನ ದಾಖಲೆಯನ್ನು ನೋಡಿದರೆ ಅವರು ಯಾವ ಮಟ್ಟಕ್ಕೂ ಇಳಿಯಬಹುದು. ಇದು ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬೇಕಾಗಿದೆ. ತನಿಖಾಧಿಕಾರಿ ಸಾಕ್ಷಿಗೆ ಬೆದರಿಕೆ ಹಾಕುವಂತಿಲ್ಲ. ಇದು ಇಡಿ, ಸಿಬಿಐ ಅಥವಾ ಬೇರಾವುದೇ ತನಿಖಾ ಸಂಸ್ಥೆಯಾದರೂ ಸರಿಯೇ... ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದು ಸರ್ಕಾರ ಪರ ವಕೀಲರು ವಾದಿಸಿದರು.