ಬಿಜೆಪಿ ಸೇರಿದ ನಿವೃತ್ತ ನ್ಯಾಯಮೂರ್ತಿ: ಹುದ್ದೆಗೆ ವಿದಾಯ ಹೇಳಿದ ಮೂರೇ ತಿಂಗಳಲ್ಲಿ ರಾಜಕೀಯ ಪ್ರವೇಶ ಮಾಡಿದ ವಿವಾದಿತ ತೀರ್ಪುಗಳ ಸರದಾರ
ಬಿಜೆಪಿ ಸೇರಿದ ನಿವೃತ್ತ ನ್ಯಾಯಮೂರ್ತಿ: ಹುದ್ದೆಗೆ ವಿದಾಯ ಹೇಳಿದ ಮೂರೇ ತಿಂಗಳಲ್ಲಿ ರಾಜಕೀಯ ಪ್ರವೇಶ ಮಾಡಿದ ವಿವಾದಿತ ತೀರ್ಪುಗಳ ಸರದಾರ
ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಿವೃತ್ತ ನ್ಯಾಯಮೂರ್ತಿ ರೋಹಿತ್ ಆರ್ಯ ಬಿಜೆಪಿ ಸೇರ್ಪಡೆಯಾಗಿದ್ಧಾರೆ. ಬಿಜೆಪಿ ಮಧ್ಯಪ್ರದೇಶ ರಾಜ್ಯ ಅಧ್ಯಕ್ಷ ಡಾ. ರಾಘವೇಂದ್ರ ಶರ್ಮಾ ಅವರಿಂದ ಪಕ್ಷದ ಸದಸ್ಯತ್ವ ಸ್ವೀಕರಿಸಿದ ಆರ್ಯ ರಾಜಕೀಯ ಪ್ರವೇಶ ಮಾಡಿದ್ದಾರೆ.
2021ರಲ್ಲಿ ಸ್ಟ್ಯಾಂಡ್ ಅಪ್ ಕಮೀಡಿಯನ್ ಮುನಾವರ್ ಫಾರೂಕಿ ಮತ್ತು ನಳಿನ್ ಯಾದವ್ ಅವರಿಗೆ ಇದೇ ನ್ಯಾ. ಆರ್ಯ ಜಾಮೀನು ನಿರಾಕರಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಆದರೆ, ಆ ಬಳಿಕ ಸುಪ್ರೀಂ ಕೋರ್ಟ್ ಫಾರೂಕಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಲೈಂಗಿಕ ದೌರ್ಜನ್ಯ ಎಸಗಿದವ ರಾಖಿ ಕಟ್ಟಿಸಬೇಕು ಎಂಬ ತೀರ್ಪಿನ ನಿವೃತ್ತ ನ್ಯಾಯಮೂರ್ತಿ ರೋಹಿತ್ ಆರ್ಯ ವಿವಾದಕ್ಕೊಳಗಾಗಿದ್ದರು. ಅಲ್ಲದೆ, ದೇಶಾದ್ಯಂತ ವ್ಯಾಪಕ ಟೀಕೆಗೂ ಗುರಿಯಾಗಿದ್ದರು.
ಆರೋಪಿ ತನ್ನ ಹೆಂಡತಿ ಜೊತೆಗೆ ಸಂತ್ರಸ್ತೆಯ ಮನೆಗೆ ತೆರಳಿ ಸಿಹಿ ಹಂಚಬೇಕು, ಸಂತ್ರಸ್ತೆಯ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳಬೇಕು. ಜೊತೆಗೆ ಯಾವತ್ತಿಗೂ ಆಕೆಗೆ ತನ್ನ ಕೈಲಾದಷ್ಟು ರಕ್ಷಣೆ ನೀಡುವುದಾಗಿ ಪ್ರಮಾಣ ಮಾಡಬೇಕು ಎಂದು ಅವರು ತೀರ್ಪಿನಲ್ಲಿ ಹೇಳಿದ್ದರು.
ಅಣ್ಣಂದಿರು, ತಂಗಿಯವರಿಗೆ ಸಾಂಪ್ರದಾಯಿಕವಾಗಿ ಕೊಡುವಂತೆ ಹಣ ನೀಡಬೇಕು. ಆಕೆಯ ಆಶೀರ್ವಾದವನ್ನೂ ಪಡೆಯಬೇಕು ಎಂದು ಆ ವಿವಾದಿತ ತೀರ್ಪಿನಲ್ಲಿ ಬರೆದಿದ್ದರು. ಆದರೆ, ಆ ಬಳಿಕ ಆ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.