ಕಾನೂನು ವೃತ್ತಿ ಒಂದು ವ್ಯಾಪಾರವಲ್ಲ: ಜಾಹೀರಾತನ್ನು ತೆಗೆದುಹಾಕಲು ವಕೀಲರಿಗೆ ಸೂಚನೆ ನೀಡಿದ ಹೈಕೋರ್ಟ್
ಕಾನೂನು ವೃತ್ತಿ ಒಂದು ವ್ಯಾಪಾರವಲ್ಲ: ಜಾಹೀರಾತನ್ನು ತೆಗೆದುಹಾಕಲು ವಕೀಲರಿಗೆ ಸೂಚನೆ ನೀಡಿದ ಹೈಕೋರ್ಟ್
ಕಾನೂನು ವೃತ್ತಿ ಒಂದು ಅಮೂಲ್ಯ ಸೇವೆ. ಇದು ವ್ಯಾಪಾರವಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, ವಕೀಲರು ಜಾಹೀರಾತು ನೀಡುವುದು ನಿಷಿದ್ಧ ಎಂದು ಪ್ರತಿಪಾದಿಸಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾ. ಎಸ್.ಎಂ. ಸುಬ್ರಹ್ಮಣ್ಯಂ ಮತ್ತು ಸಿ. ಕುಮಾರಪ್ಪನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಜಾಹೀರಾತುಗಳು, ಸಂದೇಶಗಳು ಮತ್ತು ಟೌಟ್‌ಗಳ ಮೂಲಕ ನೇರವಾಗಿ ಅಥವಾ ಪರೋಕ್ಷವಾಗಿ ಜಾಹೀರಾತು ನೀಡುವ ವಕೀಲರ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ನಡೆಸಲು ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ದೇಶನ ನೀಡಲು ಮತ್ತು ಆ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ)ಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ, "ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮ" ನಿಯಮ 36ನ್ನು ಉಲ್ಲಂಘಿಸಿದ ಆನ್‌ಲೈನ್ ಸೇವಾ "ಒದಗಿಸುವವರು / ಮಧ್ಯವರ್ತಿಗಳ" ವಿರುದ್ಧ ದೂರುಗಳನ್ನು ದಾಖಲಿಸುವಂತೆ BCI ಗೆ ನಿರ್ದೇಶನ ನೀಡಿದೆ.
ಇತ್ತೀಚೆಗೆ ಕೆಲವು ಕಾನೂನು ವೃತ್ತಿಪರರು "ವ್ಯಾಪಾರಿ ಮಾದರಿ"ಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿ. ಕಾನೂನು ಸೇವೆ ಯಾವುದೇ 'ಉದ್ಯೋಗ' ಅಥವಾ 'ವ್ಯಾಪಾರ'ವಲ್ಲ ಎಂದು ನ್ಯಾಯಪೀಠ ವ್ಯಾಖ್ಯಾನಿಸಿದೆ.
ವ್ಯಾಪಾರದ ಉದ್ದೇಶ ಮುಖ್ಯವಾಗಿ ಲಾಭ ಮಾತ್ರ. ಆದರೆ ಕಾನೂನು ಸೇವೆ ಉನ್ನತ ಮೌಲ್ಯದಿಂದ ಕೂಡಿದ್ದು, ಇದರ ಹೆಚ್ಚಿನ ಭಾಗವು ಸಮಾಜಕ್ಕೆ ಸೇವೆಯಾಗಿದೆ ಎಂದು ಹೇಳಿದ ನ್ಯಾಯಪೀಠ, ವಕೀಲರು ಸೇವಾ ಶುಲ್ಕ ಪಡೆಯಬಹುದು. ಅದು ವಕೀಲರ ಸಮಯ ಮತ್ತು ಜ್ಞಾನವನ್ನು ಗೌರವಿಸಿ ಪಾವತಿಸಲಾಗುತ್ತದೆ ಎಂದು ಹೇಳಿದೆ.
ಹೀಗಾಗಿ ವಕೀಲರು ಆನ್‌ಲೈನ್ ಸೇವಾ ಪೂರೈಕೆದಾರರ ಮೂಲಕ ಈಗಾಗಲೇ ಪ್ರಕಟಿಸಿರುವ ಜಾಹೀರಾತುಗಳನ್ನು ತೆಗೆದುಹಾಕುವಂತೆ ಮತ್ತು ಭವಿಷ್ಯದಲ್ಲಿ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಮಧ್ಯವರ್ತಿಗಳಿಗೆ ಸಲಹೆ ನೀಡುವಂತೆ ಬಾರ್ ಕೌನ್ಸಿಲ್‌ಗೆ ಸೂಚಿಸಿದೆ.
ಪ್ರಕರಣ: ಪಿ.ಎನ್. ವಿಗ್ನೇಶ್ Vs ಚೇರ್‌ಮನ್ ಮತ್ತು ಸದಸ್ಯರು, ಬಾಲ್ ಕೌನ್ಸಿಲ್ ಆಫ್ ಇಂಡಿಯಾ
ಮದ್ರಾಸ್ ಹೈಕೋರ್ಟ್, WP 31281/2019 Dated 03-07-2024